ADVERTISEMENT

ಮಂಗಳೂರು: ವೀಸಾ ವಿಸ್ತರಣೆಗೆ ವಿದ್ಯಾರ್ಥಿಗಳ ಕೋರಿಕೆ

ಪೊಲೀಸ್ ಕಮಿಷನರ್ ಭೇಟಿ ಮಾಡಿದ ಅಫ್ಗಾನ್ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 12:37 IST
Last Updated 21 ಆಗಸ್ಟ್ 2021, 12:37 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಫ್ಗಾನಿಸ್ತಾನದ ವಿದ್ಯಾರ್ಥಿಗಳ ಜತೆ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಶನಿವಾರ ಸಂವಾದ ನಡೆಸಿದರು.

‘ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆಗಳಲ್ಲಿ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 11 ವಿದ್ಯಾರ್ಥಿಗಳು ಆಫ್ಗಾನಿಸ್ತಾನಕ್ಕೆ ವಾಪಸ್ ತೆರಳಿದ್ದು ಉಳಿದ 47 ಮಂದಿಯಲ್ಲಿ ಕೆಲವರು ಇಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಕಂಡು ಅವರು ಆತಂಕಕ್ಕೆ ಒಳಗಾಗಿದ್ದರು. ಅವರಲ್ಲಿ ಧೈರ್ಯ ತುಂಬಿದ್ದೇವೆ’ ಎಂದು ಶಶಿಕುಮಾರ್ ಪ್ರತಿಕ್ರಿಯಿಸಿದರು.

ಇದೇ ವೇಳೆ ವಿದ್ಯಾರ್ಥಿಗಳು ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದರು. ‘ಅಂತಿಮ ವರ್ಷದ ವಿದ್ಯಾರ್ಥಿಗಳ ವೀಸಾ ಅವಧಿ ಸೆಪ್ಟೆಂಬರ್ ವೇಳೆಗೆ ಮುಗಿಯಲಿದೆ. ಇನ್ನು 6 ತಿಂಗಳುಗಳವರೆಗೆ ವೀಸಾ ವಿಸ್ತರಣೆ ಮಾಡಿದರೆ ಅನುಕೂಲವಾಗುತ್ತದೆ. ಅಫ್ಗಾನಿಸ್ತಾನಕ್ಕೆ ಹೋಗಿದ್ದ ವಿದ್ಯಾರ್ಥಿಗಳಿಗೆ ಮರಳಿ ಬರಲು ಸರ್ಕಾರ ಸಹಾಯ ಮಾಡಿದರೆ ಉತ್ತಮ. ತಮ್ಮ ಕುಟುಂಬ ಸೇರಲು ಬಯಸುವವರಿಗೆ ಭಾರತ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು.

ADVERTISEMENT

ಇಲ್ಲೇ ಉಳಿದು ವಾಸ್ತವ್ಯವನ್ನು ಮುಂದುವರಿಸಲು ಬಯಸುವವರಿಗೆ ನಿರಾಶ್ರಿತರ ಸ್ಥಾನಮಾನ ನೀಡಬೇಕು. ಅಲ್ಲಿನ ಪರಿಸ್ಥಿತಿ ಸಹಜವಾಗುವವರೆಗೆ ವಿದ್ಯಾರ್ಥಿಗಳು ಕೆಲಸ ಮಾಡಲು ಅನುಕೂಲಕರ ಕಲ್ಪಿಸಿದರೆ, ಅವರು ತಮ್ಮ ಜೀವನೋಪಾಯ ನೋಡಿಕೊಳ್ಳಬಹುದು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಅಫ್ಗಾನ್ ವಿದ್ಯಾರ್ಥಿಗಳ ಒಕ್ಕೂಟದ ಪ್ರಮುಖ ನಾಸಿರ್ ಅಹ್ಮದ್ ಮಾತನಾಡಿ, ‘ಸುಮಾರು 15 ವರ್ಷಗಳಿಂದೀಚೆಗೆ ಅಫ್ಗಾನ್‌ನ ಹಲವಾರು ವಿದ್ಯಾರ್ಥಿಗಳು ಮಂಗಳೂರಿಗೆ ಉನ್ನತ ವ್ಯಾಸಂಗಕ್ಕಾಗಿ ಬರುತ್ತಿದ್ದಾರೆ. ಭಾರತದ ಬಗ್ಗೆ ಅಫ್ಗಾನ್ ವಿದ್ಯಾರ್ಥಿಗಳು ಹಾಗೂ ಕುಟುಂಬದವರಿಗೆ ಅಪಾರವಾದ ಗೌರವ ಇದೆ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ’ ಎಂದರು.

‘ಕ್ರೂರತೆಯ ಅರಿವು ಇದೆ’

‘20 ವರ್ಷಗಳ ಅಫ್ಗಾನ್‌ನಲ್ಲಿ ತಾಲಿಬಾನ್ ಆಡಳಿತ ಇದ್ದಾಗ ನಡೆಸಿದ್ದ ಕ್ರೂರತೆಯ ಬಗ್ಗೆ ಅರಿವಿದೆ. ಅಲ್ಲಿರುವ ನಮ್ಮ ಕುಟುಂಬದ ಬಗ್ಗೆ ಆತಂಕವಾಗುತ್ತಿದೆ. ಮಹಿಳಾ ಶಿಕ್ಷಣ, ಸ್ವಾತಂತ್ರ್ಯವನ್ನು ನಾವು ಪ್ರೋತ್ಸಾಹಿಸುತ್ತೇವೆ. ಆದರೆ, ಅವರ ಸಿದ್ಧಾಂತದಂತೆ ಮಹಿಳೆಯರು ಮನೆಯಿಂದ ಹೊರಬರಲು ಸಹ ನಿಷೇಧವಿದೆ’ ಎಂದು ವಿದ್ಯಾರ್ಥಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.