ADVERTISEMENT

ಎ.ಜೆ.ಆಸ್ಪತ್ರೆ: ಒಂದೇ ದಿನ ಇಬ್ಬರಿಗೆ ಮೂತ್ರಪಿಂಡ ಕಸಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 6:06 IST
Last Updated 5 ಜನವರಿ 2023, 6:06 IST
ಡಾ.ಪ್ರಶಾಂತ್‌ ಮಾರ್ಲ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ.ರಾಘವೇಂದ್ರ ನಾಯಕ್‌ ಹಾಗೂ ಡಾ.ಪ್ರೀತಮ್‌ ಶರ್ಮ ಇದ್ದಾರೆ
ಡಾ.ಪ್ರಶಾಂತ್‌ ಮಾರ್ಲ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ.ರಾಘವೇಂದ್ರ ನಾಯಕ್‌ ಹಾಗೂ ಡಾ.ಪ್ರೀತಮ್‌ ಶರ್ಮ ಇದ್ದಾರೆ   

ಮಂಗಳೂರು: ‘ನಗರದ ಎ.ಜೆ. ಆಸ್ಪತ್ರೆಯಲ್ಲಿ 2022ರಲ್ಲಿ ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಅಂಗಾಂಗ ಕಸಿ ಮಾಡಲಾಗಿದೆ. ಇತ್ತೀಚೆಗೆ ಇಬ್ಬರು ರೋಗಿಗಳಿಗೆ 2022ರ ಡಿ. 11ರಂದು ಒಂದೇ ದಿನ ಇಬ್ಬರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಅಂಗಾಂಗ ಕಸಿ ಶಸ್ತ್ರಚಿಕಿತ್ಸಕ ಡಾ.ಪ್ರಶಾಂತ್‌ ಮಾರ್ಲ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಎ.ಜೆ. ಆಸ್ಪತ್ರೆಯು 2015ರಿಂದಲೇ ಅಂಗಾಂಗ ಕಸಿ ನಡೆಸುತ್ತಿದೆ. ಜಿಲ್ಲೆಯ ಮೊದಲ ಅಂಗದಾನಿಗಳಾದ ಜೀವನ್‌ ಮತ್ತು ಲೀನಾ ಅವರ ಹೆಸರು ಅವಿಸ್ಮರಣೀಯಗೊಳಿಸಲು ‘ಜೀವನ್‌ ವಿಲೀನ’ ಹೆಸರಿನಲ್ಲಿ ಅಂಗಾಂಗ ಕಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ 41 ದಾನಿಗಳಿಂದ ಪಡೆದ ಅಂಗಾಂಗಗಳನ್ನು ಕಸಿ ಮಾಡಲಾಗಿದ್ದು, 150 ರೋಗಿಗಳಿಗೆ ಪ್ರಯೋಜನವಾಗಿದೆ’ ಎಂದರು.

‘ರಾಜ್ಯ ಸರ್ಕಾರ ಜೀವನ ಸಾರ್ಥಕತೆ ಪೋರ್ಟಲ್‌ನಲ್ಲಿ ಮೂತ್ರಪಿಂಡ ಕಸಿಗಾಗಿ ನೊಂದಾಯಿಸಿದ್ದ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಒಂದೇ ದಿನ ದಾನಿಯೊಬ್ಬರ ಮೂತ್ರಪಿಂಡಗಳು ಸಿಕ್ಕವು. ಇಬ್ಬರೂ ರೋಗಿಗಳಿಗೆ ಮೂತ್ರಪಿಂಡ ಕಸಿಯನ್ನು 6– 7 ಗಂಟೆಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಈ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ತಜ್ಞ ಶಸ್ತ್ರಚಿಕಿತ್ಸಕರ ತಂಡ ಯಶಸ್ವಿಯಾಗಿ ನಿಭಾಯಿಸಿದೆ. ಕಸಿ ಶಸ್ತ್ರಚಿಕಿತ್ಸಕರಾದ ಡಾ.ಪ್ರೀತಮ್‌ ಶರ್ಮ, ಡಾ.ರೋಶನ್‌, ಮೂತ್ರರೋಗ ತಜ್ಞ ಡಾ.ರಾಘವೇಂದ್ರ ಕಾಮತ್‌, ಅರಿವಳಿಕೆ ತಜ್ಞ ಡಾ.ಹರೀಶ್ ಕಾರಂತ್‌, ಕಸಿ ಸಂಯೋಜಕಿ ಸೌಮ್ಯಾ, ಡಯಾಲಿಸಿಸ್‌ ವಿಭಾಗದ ಲೀಲಾವತಿ ಹೆಗ್ಡೆ, ಸವಿನಾ ರೋಶ್ನಿ, ಶಸ್ತ್ರಚಿಕಿತ್ಸಾ ಕೊಠಡಿಯ ಸಿಬ್ಬಂದಿ ಮಹಾಬಲ ಅವರ ನೆರವಿನಿಂದ ಇದು ಸಾಧ್ಯವಾಗಿದೆ‘ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ಪ್ರಶಾಂತ್‌ ಮಾರ್ಲ ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಡಾ.ರಾಘವೇಂದ್ರ ನಾಯಕ್‌ ಹಾಗೂ ಡಾ.ಪ್ರೀತಮ್‌ ಶರ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.