ADVERTISEMENT

ಶಾಲೆ ಆರಂಭದವರೆಗೆ ವೇತನ ನೀಡಿ

ಮಂಗಳೂರಿನಲ್ಲಿ ಸೋಮವಾರ ಅಕ್ಷರ ದಾಸೋಹ ನೌಕರರಿಂದ ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 6:28 IST
Last Updated 18 ಆಗಸ್ಟ್ 2020, 6:28 IST
ಅಕ್ಷರ ದಾಸೋಹ ನೌಕರರು ಮಂಗಳೂರಿನ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಅಕ್ಷರ ದಾಸೋಹ ನೌಕರರು ಮಂಗಳೂರಿನ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.   

ಮಂಗಳೂರು: ಬಿಸಿಯೂಟ ನೌಕರರಿಗೆ ಏಪ್ರಿಲ್‌‌ನಿಂದ ಶಾಲೆ ಆರಂಭವಾಗುವವರೆಗೆ ವೇತನ ಪಾವತಿ ಹಾಗೂ ಇತರ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಲಾಯಿತು.

ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ‘ಬಿಸಿಯೂಟ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ನಾಲ್ಕು ತಿಂಗಳಿನಿಂದ ಆದಾಯವಿಲ್ಲದೇ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಅವರ ಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಂಡು ವೇತನ ಪಾವತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿ, ‘ಕೊರೊನಾದಿಂದಾಗಿ ಅಕ್ಷರ ದಾಸೋಹ ನೌಕರರಿಗೆ ಕೆಲಸ ಹಾಗೂ ವೇತನ ಇಲ್ಲದಂತಾಗಿದೆ. ಲಾಕ್‌ಡೌನ್ ಹಾಗೂ ಬೇಸಿಗೆ ರಜೆಯ ಪರಿಹಾರವನ್ನು ನೀಡುವಂತೆ ವಿನಂತಿಸಿದರೂ, ಲಕ್ಷಾಂತರ ಕಾರ್ಮಿಕರಿಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ವೇತನ ಪಾವತಿಸುವ ತನಕ ರಾಜ್ಯದ ಎಲ್ಲ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ‌ಗಳ ಎದುರು ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ಸಂಘಟನೆ ತೀರ್ಮಾನಿಸಿದೆ ಎಂದರು.

ಸಂಘದ ಮುಖಂಡರಾದ ರೇಖಾಲತಾ, ಶಮೀನಾ ಬಾನು, ರತ್ನಮಾಲಾ, ರೆಮಿಝಾ, ಉಮಾವತಿ, ಅಂಜಲಿ, ಭವಾನಿ, ಪಾರ್ವತಿ, ಅನುರಾಧಾ ಅರುಣಾ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.