ADVERTISEMENT

ಪಾಲಿಕೆ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿದ್ದೇವೆ: ಶಾಸಕ ಕಾಮತ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 5:13 IST
Last Updated 15 ಆಗಸ್ಟ್ 2020, 5:13 IST
ವೇದವ್ಯಾಸ ಕಾಮತ್‌
ವೇದವ್ಯಾಸ ಕಾಮತ್‌   

ಮಂಗಳೂರು: ‘ಮಹಾನಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಭರವಸೆಗಳನ್ನು ಪ್ರಥಮ ಹಂತದಲ್ಲೇ ಈಡೇರಿಸಿದ್ದೇವೆ’ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಮಂಗಳೂರಿನ ಅಭಿವೃದ್ಧಿಗೆ ಪೂರಕವಾಗಿ ಟಿ.ಡಿ.ಆರ್ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟಿ.ಡಿ.ಆರ್ ಸೆಲ್ ತೆರೆಯುವ ಕುರಿತು ಭರವಸೆ ನೀಡಿದ್ದು, ಭೂಸ್ವಾಧೀನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟಿ.ಡಿ.ಆರ್ ಸೆಲ್ ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ತೆರಿಗೆ ಹಾಗೂ ಉದ್ದಿಮೆಗಳ ಮೇಲೆ ವಿಧಿಸಿರುವ ಘನತ್ಯಾಜ್ಯ ವಿಲೇವಾರಿ ಸೇವಾಶುಲ್ಕವನ್ನು ಪರಿಷ್ಕರಿಸಲಾಗಿದೆ. ಆಡಳಿತ ವ್ಯವಸ್ಥೆಯನ್ನು ಪಾರದರ್ಶಕವಾಗಿಡಲು ಬಿಜೆಪಿ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿಯೂ ವಾರ್ಡ್ ಸಮಿತಿ ರಚಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕಣ್ಣೂರು ಗ್ರಾಮದಲ್ಲಿ ಜಿ+3 ಮಾದರಿಯ 500 ಮನೆಗಳ ನಿರ್ಮಾಣ ಯೋಜನೆಗೆ ನಗರ ಸ್ಥಳೀಯ ಪಾಲಿನ ಶೇ 10 ಅನುದಾನ ಒದಗಿಸಲು ಅನುಮೋದನೆ ನೀಡಲಾಗಿದೆ. 6 ಗುಂಪುಗಳ ಜಿ+3 ಮಾದರಿಯ 21 ಬ್ಲಾಕ್‌ಗಳನ್ನು ಒಳಗೊಂಡ‌ ಲೇಔಟ್ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪದವು ಗ್ರಾಮದಲ್ಲಿ ಮಂಜೂರಾತಿ ಪಡೆದಿರುವ ಜಿ+3 ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಉಂಟಾಗಿದ್ದ ತೊಡಕನ್ನು ನಿವಾರಿಸಲಾಗಿದೆ. ಅರಣ್ಯ ಇಲಾಖೆಗೆ ಪ್ರತ್ಯೇಕ ಜಮೀನು ನೀಡಲಾಗಿದ್ದು, ಈ ಹಿಂದೆ ಗುರುತಿಸಿದ ಸ್ಥಳದಲ್ಲೇ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಪಾಲಿಕೆ ವ್ಯಾಪ್ತಿಯ ಬೋಳೂರು ಸ್ಮಶಾನದಲ್ಲಿರುವ‌ ವಿದ್ಯುತ್ ಚಿತಾಗಾರದ‌ ಸಮೀಪವೇ ₨65 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಾಲಿತ ಚಿತಾಗಾರ ನಿರ್ಮಾಣಕ್ಕೂ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.