ADVERTISEMENT

ಅಳಿವಿನಂಚಿನ ಕಲೆಗಳಿಗೆ ವೇದಿಕೆಯಾದ ನುಡಿಸಿರಿ

ಸಾಹಿತ್ಯದೊಂದಿಗೆ ಕಲೆಗೂ ಮಹತ್ವ, ರಾಜ್ಯದ ಉದ್ದಗಲದಿಂದ ಬಂದ ಜನಕ್ಕೆ ವಿಭಿನ್ನ ಅನುಭವ

ಚಿದಂಬರ ಪ್ರಸಾದ್
Published 17 ನವೆಂಬರ್ 2018, 15:59 IST
Last Updated 17 ನವೆಂಬರ್ 2018, 15:59 IST
ನುಡಿಸಿರಿಯಲ್ಲಿ ರಂಜಿಸಿದ ಹಗಲು ವೇಷ. ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ನುಡಿಸಿರಿಯಲ್ಲಿ ರಂಜಿಸಿದ ಹಗಲು ವೇಷ. ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

ಮೂಡುಬಿದಿರೆ: ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಭಾಷೆ-ಸಾಹಿತ್ಯಕ್ಕೆ ಮಾತ್ರ ಸ್ಥಾನವನ್ನು ನೀಡದೇ, ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜನಪದ ಕಲೆಗಳಿಗೂ ಪ್ರಾಶಸ್ತ್ಯ ನೀಡಿದೆ.

ಆಧುನಿಕತೆಯ ಕಾರಣದಿಂದಾಗಿ ಮರೆಯಾಗುತ್ತಿರುವ ಜಾನಪದ ಕಲೆಗಳು ಹಾಗೂ ಬೀದಿ ಕಲಾವಿದರಿಗೆ ವೇದಿಕೆಯನ್ನು ನೀಡಿ, ಅವರನ್ನು ಪ್ರೋತ್ಸಾಹಿಸುವುದರ ಜತೆಗೆ ನಶಿಸುತ್ತಿರುವ ಕಲೆಗಳನ್ನು ಕಾಪಾಡುವ ಕೈಂಕರ್ಯವನ್ನು ಮಾಡಲಾಗುತ್ತಿದೆ. ನುಡಿಸಿರಿಯ ಅಂಗಳದಲ್ಲಿ ಸುಡುಗಾಡು ಸಿದ್ಧರಂತಹ ಜನಾಂಗಗಳು, ಹಗಲು ವೇಷ, ಹುಲಿವೇಷದ ಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.

ಹಗಲುವೇಷದ ಸೊಬಗು: ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಚಲಿತವಿದ್ದ ಈ ಜನಪದ ಕಲೆಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡು ಬಂದಿರುವ ಬಳ್ಳಾರಿಯ ಬುರ್ರಕಥಾ ಈರಮ್ಮ ಫೌಂಡೇಶನ್ ಸಂಸ್ಥೆಯನ್ನು ಈ ಬಾರಿಯ ನುಡಿಸಿರಿಗೆ ಆಹ್ವಾನಿಸಿದ್ದು, ಅವರು ಪ್ರದರ್ಶಿಸಿರುವ ರಾಮಾಯಣ ಮಹಾಕಾವ್ಯದ ಶೂರ್ಪನಖಿ ಗರ್ವಭಂಗ ಪ್ರಸಂಗವು ಪ್ರೇಕ್ಷಕರ ಮನಸೂರೆಗೊಂಡಿತು.

ADVERTISEMENT

ಈ ತಂಡವು 15 ಕಲಾವಿದರನ್ನು ಒಳಗೊಂಡಿದ್ದು, ವಂಶಪಾರಂಪರ್ಯವಾಗಿ ಹಗಲುವೇಷವನ್ನು ಮಾಡುತ್ತ ಬಂದಿದೆ. ಮೈಸೂರು ದಸರಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಈ ತಂಡ ಪ್ರದರ್ಶನ ನೀಡಿದೆ. ಕೊಡಗಿನ ನೆರೆ ಪ್ರವಾಹದ ಸಂದರ್ಭದಲ್ಲಿ ತಮ್ಮೂರಾದ ಬಳ್ಳಾರಿಯ ಮನೆಮನೆಗೆ ತೆರಳಿ ಕಲಾ ಪ್ರದರ್ಶನವನ್ನು ನೀಡಿ, ಅದರಿಂದ ಬಂದ ಹಣವನ್ನು ಕೊಡಗಿಗೆ ನೀಡುವ ಮೂಲಕ ಸಮಾಜ ಸೇವೆಯಲ್ಲೂ ಈ ಜನಪದ ತಂಡ ತನ್ನನ್ನು ತೊಡಗಿಸಿಕೊಂಡಿದೆ.

ಹುಲಿವೇಷ: ತುಳುನಾಡಿನ ಜನಪದ ಕಲೆಯೆಂದೇ ಪ್ರಸಿದ್ಧಿ ಪಡೆದಿರುವ ಹುಲಿವೇಷವು, ಆಳ್ವಾಸ್ ನುಡಿಸಿರಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಬೆದ್ರ ಫ್ರೆಂಡ್ಸ್ ತಂಡವು ಈ ಹುಲಿವೇಷವನ್ನು ಪ್ರದರ್ಶಿಸಿದ್ದು, 22 ಹುಲಿ ವೇಷಧಾರಿಗಳು ಒಂದೇ ಬಾರಿಗೆ ವೇದಿಕೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು.

ನೆರೆದ ಪ್ರೇಕ್ಷಕ ವರ್ಗ ಬೇರೊಂದು ಲೋಕದಲ್ಲಿ ಕಳೆದುಹೋಗಿತ್ತು. ಈ ಕಲೆಯಲ್ಲಿ ಕೋಲಕಾಲು ಹುಲಿ ನೃತ್ಯವೂ ವಿಶೇಷವಾಗಿದ್ದು, 5 ಅಡಿ ಕೋಲನ್ನು ಕಾಲಿಗೆ ಕಟ್ಟಿಕೊಂಡು ಮಾಡಿದ ನೃತ್ಯವೂ ಎಲ್ಲರನ್ನೂ ಅಚ್ಚರಿಗೊಳಿಸಿತು.

ಸುಡುಗಾಡ ಸಿದ್ಧರು: ಸ್ಮಶಾನ ಕಾಯುವ ಹಿನ್ನೆಲೆಯಿರುವ ಜನಾಂಗ ಸುಡುಗಾಡು ಸಿದ್ಧರು. ಬಳ್ಳಾರಿಯವರಾದ ಇವರು, ಈ ಬಾರಿ ನುಡಿಸಿರಿಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಬಂದಿದ್ದಾರೆ. ವಂಶಪಾರಂಪರ್ಯವಾಗಿ ಬಂದ ಈ ಕಲಾಸಿದ್ಧಿಯು ನುಡಿಸಿರಿಗೆ ಬಂದ ಜನರನ್ನು ಆಕರ್ಷಿಸುತ್ತಿದೆ.

ತಮ್ಮ ವಿಭಿನ್ನ ವೇಷಭೂಷಣಗಳಿಂದ ಜನರನ್ನು ಆಕರ್ಷಿಸುವ ಈ ಕಲಾವಿದರು, ಆಧುನಿಕ ಜಾದೂಗಾರರನ್ನೂ ಜನಪದ ಶೈಲಿಯ ಜಾದೂವನ್ನು ಪ್ರದರ್ಶಿಸುತ್ತಾರೆ. ಜಾದು ಪ್ರದರ್ಶನದ ಜತೆಗೆ ಬಸವಣ್ಣನವರ ವಚನಗಳನ್ನೂ ಜನರಿಗೆ ಮನಮುಟ್ಟುವಂತೆ ಹಾಡುತ್ತಾರೆ. ಕವಡೆಯಿಂದ ಹನುಮಂತನ ವಿಗ್ರಹವನ್ನು ಹೊರೆತೆಗೆದ ಜಾದೂ ಪ್ರದರ್ಶನವು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.