ADVERTISEMENT

ಮಂಗಳೂರು: ನಾಲ್ವರು ಸಾಧಕರಿಗೆ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 12:21 IST
Last Updated 19 ಜನವರಿ 2024, 12:21 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಮಂಗಳೂರು: ಇಲ್ಲಿಯ ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ನೀಡುವ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ‘ಗೆ ಹಿ.ಚ. ಬೋರಲಿಂಗಯ್ಯ, ಬಸವರಾಜ ಕಲ್ಗುಡಿ, ಪಾದೇಗಲ್ಲು ವಿಷ್ಣು ಭಟ್ಟ, ಬಿ.ಜನಾರ್ದನ ಭಟ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬೋರಲಿಂಗಯ್ಯ ಅವರಿಗೆ 2020ನೇ ಸಾಲಿನ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಬಸವರಾಜ ಕಲ್ಗುಡಿ ಅವರಿಗೆ 2021ನೇ ಸಾಲಿನ, ನಿವೃತ್ತ ಪ್ರಾಚಾರ್ಯ ಪಾದೇಗಲ್ಲು ವಿಷ್ಣು ಭಟ್‌ ಅವರಿಗೆ 2022ರ ಹಾಗೂ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ಜನಾರ್ದನ ಭಟ್‌ ಅವರಿಗೆ 2023ನೇ ಸಾಲಿನ ಪ್ರಶಸ್ತಿ ನೀಡಲಾಗುತ್ತಿದೆ.

ADVERTISEMENT

ಈ ನಾಲ್ವರು ಕನ್ನಡ ನಾಡು ನುಡಿ ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಜೀವಮಾನದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದೇ 24ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಪ್ರೊ.ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಕರ್ಣಾಟಕ ಬ್ಯಾಂಕ್‌ ಮಾಜಿ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್‌. ಪ್ರಶಸ್ತಿ ಪ್ರದಾನ ಮಾಡುವರು. ಡಾ.ಅಜಕ್ಕಳ ಗಿರೀಶ ಭಟ್‌ ಅಭಿನಂದನಾ ಭಾಷಣ ಮಾಡುವರು. ಕೆ.ಜಯರಾಮ ಶೆಟ್ಟಿ, ಪ್ರೊ.ಸೋಮಣ್ಣ ಹೊಂಗಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಮಂಗಳೂರು ವಿವಿ ಕುಲಪತಿ ಜಯರಾಜ್‌ ಅಮೀನ್‌ ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಪ್ರೊ.ಎ.ವಿ. ನಾವಡ, ಗಾಯತ್ರಿ ನಾವಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.