ADVERTISEMENT

ಹಸುಗೂಸಿಗೆ ಆಧಾರ ‘ಅಮೃತ’ ಬ್ಯಾಂಕ್

ಜೂನ್ ತಿಂಗಳಿನಲ್ಲಿ 417 ತಾಯಂದಿರಿಂದ ಎದೆಹಾಲು ದಾನ

ಸಂಧ್ಯಾ ಹೆಗಡೆ
Published 7 ಜುಲೈ 2022, 4:38 IST
Last Updated 7 ಜುಲೈ 2022, 4:38 IST
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಎದೆಹಾಲು ಸಂಗ್ರಹ ಘಟಕದಲ್ಲಿ ಹಾಲನ್ನು ಸಂಸ್ಕರಿಸುವ ಯಂತ್ರ
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಎದೆಹಾಲು ಸಂಗ್ರಹ ಘಟಕದಲ್ಲಿ ಹಾಲನ್ನು ಸಂಸ್ಕರಿಸುವ ಯಂತ್ರ   

ಮಂಗಳೂರು: ನಗರದ ಲೇಡಿಗೋಶನ್ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಹಿಂದೆ ಪ್ರಾರಂಭವಾಗಿರುವ ರೋಟರಿ ‘ಅಮೃತ’ ಎದೆಹಾಲಿನ ಘಟಕಕ್ಕೆ ತಾಯಂದಿರೇ ಉದಾತ್ತ ದಾನಿಗಳು. ಹಸಿ ಬಾಣಂತಿಯರಲ್ಲಿ ಹಸುಗೂಸನ್ನು ಉಳಿಸುವ ತುಡಿತ ಜಾಗೃತವಾಗಿದೆ. ಆದರೆ, ಆಸ್ಪತ್ರೆಯಲ್ಲಿ ದಾಖಲಾಗುವ ಅವಧಿ ಪೂರ್ವ ಜನಿಸಿದ ಮಕ್ಕಳಿಗೆ ಬೇಕಾಗುವಷ್ಟು ಹಾಲಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ಮಾರ್ಚ್‌ ತಿಂಗಳಲ್ಲಿ ಆರಂಭವಾದ ಎದೆಹಾಲು ಸಂಗ್ರಹ ಬ್ಯಾಂಕ್‌, ಏಪ್ರಿಲ್‌ನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ. ಮಾರ್ಚ್‌ನಲ್ಲಿ ಏಳು ತಾಯಂದಿರಿಂದ 45 ಎಂ.ಎಲ್‌.ನಷ್ಟು ಹಾಲು ಸಂಗ್ರಹವಾಗಿತ್ತು. ಈ ಹಾಲನ್ನು ಅವಧಿಪೂರ್ವ ಜನಿಸಿದ್ದ ಅವರವರ ಮಕ್ಕಳಿಗೇ ನೀಡಲಾಯಿತು. ಏಪ್ರಿಲ್‌ನಲ್ಲಿ 162 ಬಾಣಂತಿಯರಿಂದ ಒಟ್ಟು 6,600 ಎಂ.ಎಲ್. ಹಾಲು ಸಂಗ್ರಹವಾಗಿದ್ದು, 5,700 ಎಂ.ಎಲ್ ಹಾಲನ್ನು ಯಾರಿಂದ ಸಂಗ್ರಹಿಸಲಾಗಿತ್ತೋ ಆಯಾ ಮಹಿಳೆಯ ಮಗುವಿಗೇ ನೀಡಲಾಯಿತು ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

ಮೇ ತಿಂಗಳಿನಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಯಿತು. ಒಟ್ಟು 262 ಅಮ್ಮಂದಿರಿಂದ 16,500 ಎಂ.ಎಲ್ ಎದೆಹಾಲು ಸಂಗ್ರಹಿಸಿ, 11,000 ಎಂ.ಎಲ್‌.ನಷ್ಟು ಹಾಲನ್ನು ಅವರ ಮಕ್ಕಳಿಗೇ ನೀಡಲಾಯಿತು. ಉಳಿದ 5,600 ಎಂ.ಎಲ್. ಹಾಲನ್ನು ಪಾಶ್ಚರೀಕರಿಸಿ, ಎದೆಹಾಲು ಬ್ಯಾಂಕ್‌ನಲ್ಲಿ ಇಡಲು ಅನುಕೂಲವಾಯಿತು. ಜೂನ್ ತಿಂಗಳಿನಲ್ಲಿ 417 ಬಾಣಂತಿಯರು, ಒಟ್ಟು 39,000 ಎಂ.ಎಲ್. ಹಾಲನ್ನು ದಾನ ಮಾಡಿದ್ದಾರೆ. ಅದರಲ್ಲಿ 10,000 ಎಂ.ಎಲ್. ಉಳಿಕೆಯಾಗಿದೆ ಎನ್ನುತ್ತಾರೆ ಕೇಂದ್ರದವರು.

ADVERTISEMENT

‘ಒಮ್ಮೆ 1,500 ಎಂ.ಎಲ್‌.ನಷ್ಟು ಹಾಲನ್ನು ಪಾಶ್ಚರೀಕರಣ ಮಾಡಲು ಸಾಧ್ಯ. ಘಟಕ ಆರಂಭವಾದ ಮೇಲೆ 10 ಬಾರಿ ಈ ರೀತಿ ಎದೆಹಾಲನ್ನು ಪಾಶ್ಚರೀಕರಣ ಮಾಡಲಾಗಿದೆ. ಸುಮಾರು 22 ಅವಧಿಪೂರ್ಣ ಜನಿಸಿದ, ತಾಯಿಯನ್ನು ಕಳೆದುಕೊಂಡ ಹಸುಳೆಗಳಿಗೆ ಈ ಹಾಲನ್ನು ನೀಡಲಾಗಿದೆ. ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯ ಒಂದು ನವಜಾತ ಶಿಶುವಿಗೆ ಕೂಡ ಹಾಲು ಪೂರೈಕೆ ಮಾಡಲಾಯಿತು’ ಎಂದು ಘಟಕದ ನೋಡಲ್ ಅಧಿಕಾರಿ ಡಾ. ಬಾಲಕೃಷ್ಣ ರಾವ್.

ಸಂಸ್ಕರಣೆ ಹೇಗೆ?: ಎದೆಹಾಲು ಘಟಕಕ್ಕೆ ಹಾಲನ್ನು ಸಂಗ್ರಹಿಸುವ ಪೂರ್ವದಲ್ಲಿ ದಾನ ನೀಡುವವರಿಗೆ ಎಚ್‌ಐವಿ, ಹೆಪಟೈಟಿಸ್ ಬಿ, ವಿಡಿಆರ್‌ಎಲ್, ಹೆಪಟೈಟಿಸ್ ಸಿ ಹೀಗೆ ನಾಲ್ಕು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅಲ್ಲದೆ, ದಾನಿಯು ಸ್ವಖುಷಿಯಿಂದ ಹಾಲನ್ನು ನೀಡಲು ತಯಾರಿದ್ದರೆ ಮಾತ್ರ ಹಾಲನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೂ ಪೂರ್ವದಲ್ಲಿ ಅವರಿಂದ ಅನುಮತಿ ಪತ್ರಕ್ಕೆ ಸಹಿ ಪಡೆಯಲಾಗುತ್ತದೆ.

ತಾಯಂದಿರಿಂದ ಸಂಗ್ರಹಿಸಿದ ಹಾಲನ್ನು ಜಿಲ್ಲಾ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಿ, ಅಲ್ಲಿಂದ ಸಕಾರಾತ್ಮಕ ವರದಿ ಬಂದ ಮೇಲೆ ಮಾತ್ರ ಬಳಕೆ ಮಾಡಲಾಗುತ್ತದೆ. ಲೇಡಿಗೋಶನ್ ಆಸ್ಪತ್ರೆಯ ಎನ್‌ಐಸಿಯು ಘಟಕದಲ್ಲಿ ಸರಾಸರಿ 20–22 ಅವಧಿ ಪೂರ್ವ ಜನಿಸಿದ ಮಕ್ಕಳು ಇರುತ್ತಾರೆ. 1.5 ಕೆ.ಜಿ ತೂಕಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಎದೆಹಾಲನ್ನು ಸ್ವಂತ ಹೀರುವಷ್ಟು ಸಾಮರ್ಥ್ಯ ಇರುವುದಿಲ್ಲ. ಇಂತಹ ಮಕ್ಕಳಿಗೆ ರೋಟರಿ ಕ್ಲಬ್ ನೆರವಿನಲ್ಲಿ ₹ 45 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ‘ಅಮೃತ’ ಬ್ಯಾಂಕ್ ವರದಾನವಾಗಿದೆ.

ಚೇತರಿಕೆ ಪ್ರಮಾಣ ಹೆಚ್ಚಳ

ಎದೆಹಾಲು ಸಂಗ್ರಹ ಘಟಕ ಆರಂಭವಾದ ಮೇಲೆ ಅವಧಿಪೂರ್ವ ಜನಿಸಿದ ಮಗುವಿಗೆ ಅಮೃತದಂತೆ ಎದೆಹಾಲು ಸಕಾಲಕ್ಕೆ ಸಿಗುತ್ತಿದೆ. ಇದರಿಂದ ಶಿಶುಗಳ ಚೇತರಿಕೆ ಪ್ರಮಾಣ ಹೆಚ್ಚಿದೆ. ಆಸ್ಪತ್ರೆಯಿಂದ ಶೀಘ್ರ ಬಿಡುಗಡೆಯೂ ಸಾಧ್ಯವಾಗುತ್ತಿದೆ. ಅಲ್ಲದೆ, ಸೋಂಕು ತಗಲುವ ಪ್ರಮಾಣವೂ ತಗ್ಗಿದೆ ಎನ್ನುತ್ತಾರೆ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿ.

ಘಟಕ ಆರಂಭವಾದಾಗ ಎದೆಹಾಲು ದಾನ ಮಾಡಲು ತಾಯಂದಿರು ಹಿಂದೇಟು ಹಾಕುತ್ತಿದ್ದರು. ನರ್ಸ್‌ಗಳು ಬಾಣಂತಿಯರಲ್ಲಿ ಜಾಗೃತಿ ಮೂಡಿಸುತ್ತಿರುವ ಪರಿಣಾಮ, ದಾನಿಗಳ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದೆ.ಇನ್ನಷ್ಟು ಹೆಚ್ಚು ತಾಯಂದಿರಲ್ಲಿ ಜಾಗೃತಿ ಮೂಡಿದರೆ ಘಟಕದಲ್ಲಿ ಸಂಗ್ರಹವೂ ಹೆಚ್ಚುತ್ತದೆ. ಗುಣಮಟ್ಟ ಕಾಪಾಡುವ ಕಾರಣಕ್ಕೆ ಆಸ್ಪತ್ರೆಯಲ್ಲಿ ಮಾತ್ರ ಎದೆಹಾಲನ್ನು ಸಂಗ್ರಹಿಸಲಾಗುತ್ತಿದೆ. ಹೊರ ಪ್ರದೇಶಗಳಿಂದ ಸಂಗ್ರಹಿಸಿ ತರುವ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ ಎನ್ನುತ್ತಾರೆ ವೈದ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.