ADVERTISEMENT

ದ.ಕ. ಜಿಲ್ಲೆಯಲ್ಲಿ 56 ಸಕ್ರಿಯ ಕೋವಿಡ್-19 ಪ್ರಕರಣ

ಬಂಟ್ವಾಳದ ವೃದ್ಧೆ ಸೇರಿ 8 ಮಂದಿಗೆ ಸೋಂಕು: 12 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 16:36 IST
Last Updated 5 ಜೂನ್ 2020, 16:36 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 8 ಮಂದಿಗೆ ಕೋವಿಡ್–19 ಸೋಂಕು ದೃಢವಾಗಿದೆ. ಈ ಮಧ್ಯೆ ಮತ್ತೆ
12 ಜನರು ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಒಟ್ಟು 88 ಜನರು ಗುಣಮುಖರಾದಂತಾಗಿದೆ.

ಮಹಾರಾಷ್ಟ್ರದಿಂದ ಬಂದಿದ್ದ 31, 35, 38, 46 ವರ್ಷದ ಮಹಿಳೆಯರು, 17 ವರ್ಷದ ಬಾಲಕ, 29, 30, 31, 34, 47, 48 ಹಾಗೂ 52 ವರ್ಷದ ಪುರುಷರು ಗುಣಮುಖರಾಗಿದ್ದಾರೆ. ಅವರ ಗಂಟಲು ದ್ರವದ ಮಾದರಿ ನೆಗೆಟಿವ್‌ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

8 ಮಂದಿಗೆ ದೃಢ: ಮೇ 13 ರಂದು ದುಬೈನಿಂದ ಬಂದು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 58 ವರ್ಷದ ಪುರುಷ, ಕ್ವಾರಂಟೈನ್‌ ಅವಧಿ ಪೂರೈಸಿ, ನಗರಕ್ಕೆ ಬಂದಿದ್ದು, ಅವರಿಗೆ ಇದೀಗ ಸೋಂಕು ದೃಢವಾಗಿದೆ. ಮೇ 12 ರಂದು ಮುಂಬೈನಿಂದ ಬಂದಿದ್ದ 48 ವರ್ಷದ
ಪುರುಷ, ಮೇ 13 ರಂದು ಮುಂಬೈನಿಂದ ಬಂದಿದ್ದ 24 ವರ್ಷದ ಯುವಕ, 43 ಹಾಗೂ 52 ವರ್ಷದ ಪುರುಷರು, ಮೇ ರಂದು ಮುಂಬೈನಿಂದ ಬಂದಿದ್ದ 58 ವರ್ಷದ ವ್ಯಕ್ತಿ, ಮೇ 19 ರಂದು ಮುಂಬೈನಿಂದ ಬಂದಿದ್ದ 43 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ. ಇವರೆಲ್ಲರೂ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಕ್ವಾರಂಟೈನ್‌ ಅವಧಿ ಮುಗಿಸಿ, ಜಿಲ್ಲೆಗೆ ಮರಳಿದ್ದಾರೆ.

ADVERTISEMENT

ಈ ಮಧ್ಯೆ ಬಂಟ್ವಾಳದ 60 ವರ್ಷ ವೃದ್ಧೆಗೂ ಸೋಂಕು ತಗಲಿದ್ದು, ಅವರನ್ನು ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ ಒಬ್ಬರಿಗೆ ಸೋಂಕು: ಕಳೆದ ಕೆಲ ದಿನಗಳಿಂದ ಹಲವಾರು ಪ್ರಕರಣಗಳು ಪತ್ತೆಯಾಗುತ್ತಿದ್ದ ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಒಬ್ಬರಲ್ಲಿ ಮಾತ್ರ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಈ ನಡುವೆ 7 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಿಂದ ಬಂದಿದ್ದ ಪಡನ್ನ ಗ್ರಾಮ ಪಂಚಾಯಿತಿ ನಿವಾಸಿ 39 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಜಿಲ್ಲೆಯಲ್ಲಿ ಈಗ ಒಟ್ಟು 103 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.