ADVERTISEMENT

ಶಾಸಕ ಹರೀಶ್‌ ಪೂಂಜ ವಿರುದ್ಧ ಮತ್ತೊಂದು ಎಫ್‌ಐಆರ್‌

ಪೊಲೀಸರ ಕಾಲರ್‌ ಹಿಡಿಯಲು ಸಿದ್ಧ, ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಠಾಣೆಗೆ ಆದ ಗತಿ ಕಾಣಿಸುವೆ ಎಂದಿದ್ದ ಶಾಸಕ

​ಪ್ರಜಾವಾಣಿ ವಾರ್ತೆ
Published 21 ಮೇ 2024, 17:26 IST
Last Updated 21 ಮೇ 2024, 17:26 IST
ಹರೀಶ್ ಪೂಂಜ
ಹರೀಶ್ ಪೂಂಜ   

ಬೆಳ್ತಂಗಡಿ: ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಬಿಜೆಪಿ ಯುವ ಮೋರ್ಚಾ‌ದ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಬಂಧನ ಖಂಡಿಸಿ ಇಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಸಂದರ್ಭ ಪೊಲೀಸರಿಗೆ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಕ್ಷೇತ್ರದ ಶಾಸಕ ಹರೀಶ್‌ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮಂಗಳವಾರ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

‘ಶಶಿರಾಜ್‌ ಶೆಟ್ಟಿ ಬಂಧನ ಖಂಡಿಸಿ ಬೆಳ್ತಂಗಡಿಯ ವಿಕಾಸಸೌಧದ ಎದುರು ಸೋಮವಾರ ಬಿಜೆಪಿ ವತಿಯಿಂದ ನಡೆಸಿದ್ದ ಪ್ರತಿಭಟನೆಗೆ ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆದಿರಲಿಲ್ಲ. ಶಾಸಕ ಹರೀಶ್ ಪೂಂಜ ಮತ್ತು ಇತರರು ಸೇರಿ ಈ ಪ್ರತಿಭಟನೆ ಸಭೆ ನಡೆಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಂಧಿತ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ದ ಎಂದು ಈ ಪ್ರತಿಭಟನಾ ಸಭೆಯಲ್ಲಿ ಹರೀಶ್‌ ಪೂಂಜ ಹೇಳಿದ್ದಾರೆ. ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿದ್ದಾರೆ. ಬೆಳ್ತಂಗಡಿ ಠಾಣೆಯ ಇನ್‌ಸ್ಪೆಕ್ಟರ್‌ಗೆ, ಇತರ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿದ್ದಾರೆ. ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳ ಸಲುವಾಗಿ ತಾಲ್ಲೂಕು ಕಚೇರಿಗೆ  ಹೋಗದಂತೆ ತಡೆ ಒಡ್ಡಿದ್ದಾರೆ. ಈ ಅಂಶಗಳು ಎಫ್‌ಐಆರ್‌ನಲ್ಲಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.  

ADVERTISEMENT

‘ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 143 (ಕಾನೂನುಬಾಹಿರವಾಗಿ ಗುಂಪುಗೂಡುವುದು), ಸೆಕ್ಷನ್‌ 147 (ಗಲಭೆ ಸೃಷ್ಟಿ), ಸೆಕ್ಷನ್‌ 341 (ಅಕ್ರಮವಾಗಿ ನಿರ್ಬಂಧಿಸುವಿಕೆ), ಸೆಕ್ಷನ್‌ 504 (ಉದ್ದೇಶಪೂರ್ವಕವಾಗಿ ಹೀಯಾಳಿಸಿ ಪ್ರಚೋದನೆಗೆ ಒಳಪಡಿಸುವುದು), ಸೆಕ್ಷನ್‌ 506 (ಕ್ರಿಮಿನಲ್‌ ಬೆದರಿಕೆ ಒಡ್ಡುವುದು) ಜೊತೆಗೆ ಸೆಕ್ಷನ್‌ 149ರ (ಉದ್ದೇಶಪೂರ್ವಕಾಗಿ ಗುಂಪುಗೂಡಿ ಸಂಚು ರೂಪಿಸುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಬಂಧಿತನಾಗಿದ್ದ  ಶಶಿರಾಜ್‌ ಶೆಟ್ಟಿ ಬಿಡುಗಡೆಗೆ ಆಗ್ರಹಿಸಿ ಪೊಲೀಸರಿಗೆ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಶಾಸಕ ಹರೀಶ್‌ ಪೂಂಜ ವಿರುದ್ಧ ಭಾನುವಾರ ಎಫ್‌ಐಆರ್‌ ದಾಖಲಾಗಿತ್ತು.

ಅರಣ್ಯ ಒತ್ತುವರಿ ಮಾಡಿದ್ದವರನ್ನು ಒಕ್ಕಲೆಬ್ಬಿಸುತ್ತಿದ್ದ ಅರಣ್ಯಾಧಿಕಾರಿಗಳಿಗೆ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಶಾಸಕ ಹರೀಶ್‌ ಪೂಂಜ ವಿರುದ್ಧ ಕೆಲ ತಿಂಗಳ ಹಿಂದೆ ಎಫ್‌ಐಆರ್‌ ದಾಖಲಾಗಿತ್ತು.

ಪೂಂಜ ವಿರುದ್ಧ ಪೊಲೀಸ್ ಅಧಿಕಾರಿಗಳನ್ನು ಹಿಯಾಳಿಸಿ, ಬೆದರಿಕೆ ಒಡ್ಡಿದ ಆರೋಪ ಬೆಳ್ತಂಗಡಿ ವಿಕಾಸ ಸೌಧದ ಎದುರು  ಅನುಮತಿ ಪಡೆಯದೇ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.