ADVERTISEMENT

ಪರ್ಯಾಯ ಬೆಳೆ: ₹ 3.25 ಕೋಟಿ ಪ್ಯಾಕೇಜ್

ಅಡಿಕೆ ಹಳದಿ ರೋಗ ಪೀಡಿತ ಪ್ರದೇಶಕ್ಕೆ ಪೈಲೆಟ್ ಯೋಜನೆ

ಸಂಧ್ಯಾ ಹೆಗಡೆ
Published 22 ಮೇ 2022, 3:00 IST
Last Updated 22 ಮೇ 2022, 3:00 IST
ಹಳದಿ ರೋಗ ಬಾಧಿತ ಅಡಿಕೆ ತೋಟ (ಸಾಂದರ್ಭಿಕ ಚಿತ್ರ)
ಹಳದಿ ರೋಗ ಬಾಧಿತ ಅಡಿಕೆ ತೋಟ (ಸಾಂದರ್ಭಿಕ ಚಿತ್ರ)   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಳದಿ ರೋಗ ಬಾಧಿತ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಮತ್ತು ರೋಗ ನಿಯಂತ್ರಣಕ್ಕೆ ಸಂಶೋಧನೆ ನಡೆಸಲು ರಾಜ್ಯ ಸರ್ಕಾರ ₹ 3.25 ಕೋಟಿ ಮೊತ್ತದ ಪ್ಯಾಕೇಜ್ ಮಂಜೂರುಗೊಳಿಸಿದೆ.

ಹಳದಿ ರೋಗ ಬಾಧಿತ ಸುಳ್ಯ ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ತೋಟಗಾರಿಕಾ ಇಲಾಖೆ ಎರಡು ವರ್ಷಗಳ ಹಿಂದೆ ಸಮೀಕ್ಷೆ ನಡೆಸಿ, 1217.38 ಹೆಕ್ಟೇರ್ ವಿಸ್ತೀರ್ಣದ ಅಡಿಕೆ ತೋಟ ರೋಗಕ್ಕೆ ತುತ್ತಾಗಿರುವುದನ್ನು ಗುರುತಿಸಿತ್ತು. ಇದರಿಂದ ಸುಮಾರು 5,588 ರೈತರು ತೊಂದರೆ ಒಳಗಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಿತ್ತು.2,092 ರೈತರು ತೆಂಗು ಬೆಳೆಯಲು, 581 ರೈತರು ಗೇರು ಬೆಳೆಯಲು, 1,546 ರೈತರು ಕೋಕೊ ಮತ್ತು 97 ರೈತರು ತಾಳೆ ಬೆಳೆಯಲು ಜತೆಗೆ, ಅಂತರ ಬೆಳೆ ಹಾಗೂ ಮಿಶ್ರ ಬೆಳೆಗಳಾದ ಕಾಳುಮೆಣಸು, ರಬ್ಬರ್, ಬಾಳೆ, ಜಾಯಿಕಾಯಿ ಬೆಳೆಯಲು ಆಸಕ್ತಿ ತೋರಿದ್ದರು. ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ ಪ್ರೋತ್ಸಾಹಧನ ನೀಡಲು ಮತ್ತು ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ₹ 18.28 ಕೋಟಿ ಮೊತ್ತದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಈ ವರದಿಯನ್ನು ಆಧರಿಸಿ ಮತ್ತು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ, ರೈತರು ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

ADVERTISEMENT

ರೋಗ ಬಾಧಿತ ತೋಟದಲ್ಲಿ ಇಳುವರಿ ಕುಂಠಿತವಾಗಿ ಕ್ರಮೇಣ ಅಡಿಕೆ ಮರಗಳು ಸಾಯುತ್ತವೆ. ಹೀಗಾಗಿ, ಹಾಲಿ ಇರುವ ತೋಟಗಳ ನಡುವೆ ಪರ್ಯಾಯ ಬೆಳೆ ಪ್ರಾರಂಭಿಸಿದರೆ, ರೈತರ ಆದಾಯಕ್ಕೆ ಅನುಕೂಲ. ತಾಳೆ, ಬಾಳೆ, ರಾಂಬುಟಾನ್, ಮ್ಯಾಂಗೊಸ್ಟಿನ್, ತೆಂಗು ಅಥವಾ ರೈತರು ಆಸಕ್ತಿ ಹೊಂದಿರುವ ಇತರ ಯಾವುದೇ ಬೆಳೆಗಳನ್ನು ಬೆಳೆಸಬಹುದು ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸ್ತುತ ಮಂಜೂರು ಆಗಿರುವ ಅನುದಾನದಲ್ಲಿ ₹ 2.25 ಕೋಟಿ ಪರ್ಯಾಯ ಬೆಳೆಗೆ ಹಾಗೂ ₹ 1 ಕೋಟಿ ಮೊತ್ತವನ್ನು ಸಂಶೋಧನೆಗೆ ಮೀಸಲಿಡಲಾಗಿದೆ. ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ, ರೋಗ ನಿಯಂತ್ರಣದ ಬಗ್ಗೆ ಸಂಶೋಧನೆಯನ್ನು ನಡೆಸುವಂತೆ ಸಿಪಿಸಿಆರ್‌ಐಗೆ ತಿಳಿಸಲಾಗಿದೆ ಎಂದು ಅವರು ವಿವರಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದ ನಿಯಮಾವಳಿಯ ಅನ್ವಯ ಪರ್ಯಾಯ ಬೆಳೆಗೆ ರೈತರು ವೆಚ್ಚ ಮಾಡುವ ಶೇ 50ರಷ್ಟನ್ನು ಸರ್ಕಾರ ನೀಡುತ್ತದೆ. ಉದ್ಯೋಗ ಕಾರ್ಡ್ ಇರುವ ಫಲಾನುಭವಿಗಳು ಉದ್ಯೋಗ ಖಾತ್ರಿಯಲ್ಲೂ ಈ ಯೋಜನೆ ಕಾರ್ಯಗತಗೊಳಿಸಬಹುದು. ಸಮೀಕ್ಷೆಯ ನಂತರ ಕೂಡ ಕೆಲವು ಪ್ರದೇಶಗಳಲ್ಲಿ ರೋಗಗಳು ಕಾಣಿಸಿಕೊಂಡಿರಬಹುದು. ಅಂತಹ ರೈತರು ಕೂಡ ಅರ್ಜಿ ನೀಡಬಹುದಾಗಿದ್ದು, ಅನುದಾನದ ಲಭ್ಯತೆ ಆಧರಿಸಿ, ಪರ್ಯಾಯ ಬೆಳೆ ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.