ADVERTISEMENT

Asian Athletics Championship: ಮಣಿಕಂಠ, ಸ್ನೇಹಾಗೆ ಅಂತರರಾಷ್ಟ್ರೀಯ ‘ಟಿಕೆಟ್‌’

ವಿಕ್ರಂ ಕಾಂತಿಕೆರೆ
Published 28 ಏಪ್ರಿಲ್ 2025, 7:15 IST
Last Updated 28 ಏಪ್ರಿಲ್ 2025, 7:15 IST
ರಾಷ್ಟ್ರೀಯ ಫೆಡರೇಷನ್ ಅಥ್ಲೆಟಿಕ್‌ ಸ್ಪರ್ಧೆಯಲ್ಲಿ ಗೆದ್ದ ಪದಕದೊಂದಿಗೆ ಸ್ನೇಹಾ ಮತ್ತು ಕೋಚ್ ಅಜಿತ್
ರಾಷ್ಟ್ರೀಯ ಫೆಡರೇಷನ್ ಅಥ್ಲೆಟಿಕ್‌ ಸ್ಪರ್ಧೆಯಲ್ಲಿ ಗೆದ್ದ ಪದಕದೊಂದಿಗೆ ಸ್ನೇಹಾ ಮತ್ತು ಕೋಚ್ ಅಜಿತ್   

ಮಂಗಳೂರು: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಅಭ್ಯಾಸ ಮಾಡಿ ದೇಶದ ನಾನಾ ಭಾಗಗಳಲ್ಲಿ ಪದಕಗಳನ್ನು ಗೆದ್ದಿರುವ ಸ್ಪ್ರಿಂಟ್ ತಾರೆಗಳಾದ ಮಣಿಕಂಠ ಹೋಬಳಿದಾರ್ ಮತ್ತು ಸ್ನೇಹಾ ಎಸ್‌.ಎಸ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಅವಕಾಶ ದೊರಕಿದೆ. ಮೇ ತಿಂಗಳ 24ರಿಂದ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ಇವರಿಬ್ಬರಿಗೂ ಇದು ಮೊದಲ ಅಂತರರಾಷ್ಟ್ರೀಯ ಸ್ಪರ್ಧೆ.

ಕೇರಳದ ಕೊಚ್ಚಿಯಲ್ಲಿ ನಡೆದ ರಾಷ್ಟ್ರೀಯ ಫೆಡರೇಷನ್ ಅಥ್ಲೆಟಿಕ್‌ ಸ್ಪರ್ಧೆಯಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಭಾರತದ 59 ಮಂದಿಯ ತಂಡವನ್ನು ಆಯ್ಕೆ ಮಾಡಲಾಗಿದೆ. ಪುರುಷರ ಮತ್ತು ಮಹಿಳೆಯರ 4x100 ಮೀಟರ್ಸ್ ರಿಲೆ ತಂಡಗಳಿಗೆ ಆಯ್ಕೆ ಮಾಡಿದ ತಲಾ ಆರು ಮಂದಿಯಲ್ಲಿ ಕರ್ನಾಟಕದ ಒಟ್ಟು ನಾಲ್ವರು ಇದ್ದಾರೆ. ಪುರುಷರ ತಂಡಕ್ಕೆ ಮಣಿಂಠನ್ ಆಯ್ಕೆಯಾಗಿದ್ದರೆ ಮಹಿಳೆಯರ ತಂಡದಲ್ಲಿ ಸ್ನೇಹಾ, ಬೆಂಗಳೂರಿನ ದಾನೇಶ್ವರಿ ಎ.ಟಿ. ಮತ್ತು ವಿ.ಸುದೀಕ್ಷಾ ಇದ್ದಾರೆ. 

ಮಣಿಕಂಠ, ಉಡುಪಿ ಜಿಲ್ಲೆಯ ಬೈಂದೂರಿನ ಬಾಡ ಗ್ರಾಮದವರು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರು ಸ್ನೇಹಾ. ಇಬ್ಬರೂ ಆರಂಭದಲ್ಲಿ ಜಂಪ್‌ ಅಭ್ಯಾಸ ಮಾಡಿ, ಟ್ರ್ಯಾಕ್‌ಗೆ ಕಾಲಿರಿಸಿದ ನಂತರ ಸ್ಪ್ರಿಂಟ್‌ನಲ್ಲಿ ಮಿಂಚಿದವರು. ಮಣಿಕಂಠ ಈಗ ಸರ್ವಿಸಸ್‌ನಲ್ಲಿದ್ದು ಮುಂಬೈಯ ರಿಲಯನ್ಸ್ ಫೌಂಡೇಷನ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸ್ನೇಹಾ ಆದಾಯ ತೆರಿಗೆ ಇಲಾಖೆಯ ಉದ್ಯೋಗಿ, ಅಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ಅಭ್ಯಾಸ ಮುಂದುವರಿಸಿದ್ದಾರೆ.

ADVERTISEMENT

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಇಂಡಿಯನ್‌ ಗ್ರ್ಯಾನ್‌ಪ್ರಿಯಲ್ಲಿ ಮಣಿಕಂಠ ಅವರ ಗರಿಷ್ಠ ಸಾಧನೆ (10.22 ಸೆ.) ದಾಖಲಾಗಿತ್ತು. ಫೆಡರೇಷನ್ ಅಥ್ಲೆಟಿಕ್‌ ಸ್ಪರ್ಧೆಯ ಫೈನಲ್‌ನಲ್ಲಿ ಕಂಚಿನ ಪದಕ (10.35) ಗಳಿಸಿದರೂ ಏಷ್ಯನ್ ಚಾಂಪಿಯನ್‌ಷಿಪ್‌ ಅರ್ಹತೆಗೆ ನಿಗದಿ ಮಾಡಿದ್ದ ಸಮಯದ ಸಾಧನೆ ಮಾಡಿದ್ದರು. ಉಡುಪಿಯಲ್ಲಿ ಅನಂತರಾಮ್‌, ಬೆಂಗಳೂರಿನಲ್ಲಿ ರವಿ ಅಣ್ಣಪ್ಪ ಮತ್ತು ಅಬೂಬಕ್ಕರ್ ಬಳಿ ತರಬೇತಿ ಪಡೆದಿರುವ ಅವರು 2023 ಮತ್ತು 2024ರ ರಾಷ್ಟ್ರೀಯ ಮುಕ್ತ ಕೂಟಗಳಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗಳಿಸಿದ್ದಾರೆ.  

ಕೊಪ್ಪದಿಂದ ಕೊರಿಯಾಗೆ...

ಕೊಪ್ಪದ ರೈತ ದಂಪತಿ ಸತ್ಯನಾರಾಯಣ–ಶಾಲಿನಿ ಪುತ್ರಿ ಸ್ನೇಹಾಗೆ ಆರಂಭದಲ್ಲಿ ತರಬೇತಿ ನೀಡಿದವರು ಸಿದ್ದರಾಜು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಒದುತ್ತಿದ್ದಾಗ ಮಾನೆ, ಸಂದೇಶ್ ಮತ್ತು ನಿಖಿಲ್ ಜೋಸೆಫ್ ಬಳಿ ತರಬೇತಿ ಪಡೆದರು. ಕೆಲವು ಕಾಲ ಕೇರಳದಲ್ಲಿದ್ದು ವಾಪಸಾಗಿ  ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಏಕಲವ್ಯ ಕ್ರೀಡಾ ಅಕಾಡೆಮಿಯಲ್ಲಿ ಅಜಿತ್ ಕುಮಾರ್ ಬಳಿ ಅಭ್ಯಾಸ ಮಾಡುತ್ತಿದ್ದಾರೆ.

ದಕ್ಷಿಣ ವಲಯ ಕ್ರೀಡಾಕೂಟದ 100 ಮೀಟರ್ಸ್‌ ಓಟದಲ್ಲಿ ಚಿನ್ನ ಮತ್ತು ಲಾಂಗ್‌ಜಂಪ್‌ನಲ್ಲಿ ಕಂಚು ಗೆದ್ದಿರುವ ಸ್ನೇಹಾ ರಾಷ್ಟ್ರೀಯ ಮಟ್ಟದಲ್ಲಿ 10 ಚಿನ್ನ ಸೇರಿದಂತೆ 18 ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಪೈಕಿ 3 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಈ ವರ್ಷವೇ ಗೆದ್ದಿದ್ದಾರೆ ಎಂದು ಅಜಿತ್ ಕುಮಾರ್ ತಿಳಿಸಿದರು. 

ಮಣಿಂಠ
ಮಣಿಕಂಠ
ಜಂಪ್‌ಗಳಲ್ಲಿ ಸ್ಪರ್ಧಿಸುತ್ತಿದ್ದೆ. ಟ್ರಿಪಲ್ ಜಂಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದೇನೆ. ಟ್ರ್ಯಾಕ್‌ಗೆ ಬಂದ ನಂತರ ಗಟ್ಟಿಯಾಗಿ ನೆಲೆಯೂರಿದೆ. ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಖುಷಿ ನೀಡಿದೆ.
ಮಣಿಕಂಠ ಭಾರತ ರಿಲೆ ತಂಡದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.