ADVERTISEMENT

ಬಾಡಿಗೆ ದರ ಪರಿಷ್ಕರಣೆಗೆ ಕ್ರಮ

ಸಂಚಾರಿ ನಿಯಮ ಪಾಲಿಸಿ, ಮಾದರಿಯಾಗಲು ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:59 IST
Last Updated 12 ಮೇ 2022, 15:59 IST

ಮಂಗಳೂರು: ‘ಆಟೊರಿಕ್ಷಾ ಹಾಗೂ ಟ್ರಕ್ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಟೊರಿಕ್ಷಾ ಹಾಗೂ ಟ್ರಕ್ ಚಾಲಕ-ಮಾಲೀಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ತರಾತುರಿಯಲ್ಲಿ ಬೆಲೆ ಏರಿಕೆ ಮಾಡುವುದು ಸರಿಯಲ್ಲ. ಜನಸಾಮಾನ್ಯರಿಗೆ ಹಾಗೂ ಚಾಲಕರಿಗೆ ಅನ್ಯಾಯವಾಗದ ರೀತಿ ಬೆಲೆ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು. ಆಟೊರಿಕ್ಷಾ ನಿಲ್ದಾಣ ಇಲ್ಲದ ಪ್ರದೇಶಗಳಲ್ಲಿ ಇತರ ವಾಹನಗಳಿಗೆ ಹಾಗೂ ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವ್ಯವಸ್ಥಿತ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುವುದು ಎಂದರು.

ADVERTISEMENT

ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಜೋಕಟ್ಟೆಯಲ್ಲಿ ಸ್ಥಳ ನಿಗದಿಯಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಟ್ರಕ್ ಚಾಲಕ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದರೆ ಅಂತಹವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವರ್ಣೇಕರ್, ಆಟೊರಿಕ್ಷಾ ಚಾಲಕ-ಮಾಲೀಕರ ಸಂಘದ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ, ಟ್ರಕ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಡಿಸೋಜ, ಗೌರವ ಸಲಹೆಗಾರ ಬಿ.ಎಸ್. ಚಂದ್ರು, ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.