
ಮೂಲ್ಕಿ: ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿ ನಾಲ್ಕು ವರ್ಷದ ಬಳಿಕ ಪ್ರಥಮ ಅವಧಿಯ ಕೌನ್ಸಿಲರ್‌ಗಳ ಆಯ್ಕೆಗೆ ಡಿ.21ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.
ಬಜಪೆಯ 19 ವಾರ್ಡ್‌ಗಳಿಗೆ 59, ಕಿನ್ನಿಗೋಳಿ 18 ವಾರ್ಡ್‌ಗಳಿಗೆ 42 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಎರಡೂ ಪಂಚಾಯಿತಿಗಳ ಒಟ್ಟು 33 ಸಾವಿರ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಬಜಪೆಯಲ್ಲಿ 19 ಮತಗಟ್ಟೆಗಳಿಗೆ ಸಂಬಂಧಿಸಿ ತಲಾ ಇಬ್ಬರು ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಚುನಾವಣಾಧಿಕಾರಿ, ಇಬ್ಬರು ಗ್ರೂಪ್ ಡಿ, ಪೊಲೀಸ್ ಸಿಬ್ಬಂದಿ ಸೇರಿ ೮ ಮಂದಿಯನ್ನು ನಿಯೋಜಿಸಲಾಗಿದೆ. 19 ಮತಗಟ್ಟೆಗಳಿಗೆ 152 ಮಂದಿ ಇದ್ದಾರೆ.
ಕಿನ್ನಿಗೋಳಿಯಲ್ಲಿ 18 ಮತಗಟ್ಟೆಗಳಿಗೆ ಸಂಬಂಧಿಸಿ ತಲಾ ಇಬ್ಬರು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಸೆಕ್ಟರ್ ಅಧಿಕಾರಿಗಳು, ಪ್ರತಿ ವಾರ್ಡ್‌ಗೆ ಒಬ್ಬರು ಮತಗಟ್ಟೆ ಅಧಿಕರಿ, ಸಹಾಯಕ ಮತಗಟ್ಟೆ ಅಧಿಕಾರಿ, ಚುನಾವಣಾಧಿಕಾರಿ, ಗ್ರೂಪ್ ಡಿ, ಪೊಲೀಸ್ ಸಿಬ್ಬಂದಿ ಸೇರಿ ತಲಾ 8 ಮಂದಿಯಂತೆ 144 ಮಂದಿಯನ್ನು ನಿಯೋಜಿಸಿದೆ.
ಬಜಪೆಯ 18ನೇ ವಾರ್ಡನ್ನು ಕೊನೆಯ ಕ್ಷಣದಲ್ಲಿ ಸಮುದಾಯ ಭವನದಿಂದ 400 ಮೀ ಅಂತರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಎರಡೂ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಲಾ ಒಬ್ಬರು ಎಸಿಪಿ, ಇನ್‌ಸ್ಪೆಕ್ಟರ್, ಎಸ್‌ಐ, ಎಎಸ್‌ಐ, 44 ಸಿಬ್ಬಂದಿ, 1 ಮೀಸಲು ವ್ಯಾನ್ ಸಹಿತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಿನ್ನಿಗೋಳಿ ಬಸ್‌ನಿಲ್ದಾಣದಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯವರೆಗೆ ಮೂಲ್ಕಿ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಎಸ್‌ಎಎಫ್, ಸಿಎಆರ್ ಹಾಗೂ ಮೂಲ್ಕಿ ಪೊಲೀಸ್ ಠಾಣೆ ಸಿಬ್ಬಂದಿ ಪಥ ಸಂಚಲನ ನಡೆಸಿ ಭದ್ರತೆಯ ಜಾಗೃತಿ ಮೂಡಿಸಿದರು.
ಬಜಪೆ ಹಾಗೂ ಮಳವೂರು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಬಜಪೆ ಪಟ್ಟಣ ಪಂಚಾಯಿತಿಯಾಗಿ ಹಾಗೂ ಕಿನ್ನಿಗೋಳಿ, ಮೆನ್ನಬೆಟ್ಟು, ಕಟೀಲು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ 2021ರ ಏಪ್ರಿಲ್‌ನಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಅಧಿಕೃತ ಘೋಷಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.