
ಬಜಪೆ: ಬಜಪೆ ಪಟ್ಟಣ ಪಂಚಾಯಿತಿ ಸ್ಥಾಪನೆಯಾಗಿ ನಾಲ್ಕು ವರ್ಷ 10 ತಿಂಗಳುಗಳ ತರುವಾಯ ಚುನಾವಣೆಗೆ ಆಖಾಡ ಸಜ್ಜಾಗಿದೆ. ಈ ಪಟ್ಟಣದ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಎಸ್‌ಡಿಪಿಐ ಹಾಗೂ ಆಮ್ ಆದ್ಮಿ ಪಾರ್ಟಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚುನಾವಣೆ ಕಾವೇರಿದೆ.
ನಾಮಪತ್ರ ಹಿಂಪಡೆಯುವ ಅವಧಿ ಮುಗಿದಿದ್ದು, 19 ವಾರ್ಡ್‌ಗಳಲ್ಲಿ 59 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲ ವಾರ್ಡ್‌ಗಳಲ್ಲೂ ಅಭ್ಯರ್ಥಿಯನ್ನು ನಿಲ್ಲಿಸಿವೆ. ಬಂಡಾಯ ಅಭ್ಯರ್ಥಿಗಳ ಕಾರಣದಿಂದಲೂ ಈ ಹಣಾಹಣಿ ಗಮನ ಸೆಳೆದಿದೆ. ಇದೇ 21ರಂದು ಮತದಾನ ನಡೆಯಲಿದೆ.
ಬಜಪೆ ಮತ್ತು ಮಳವೂರು ಗ್ರಾಮ ಪಂಚಾಯಿತಿ ವ್ಯಾಕ್ತಿಯ ಮಳವೂರು ಮತ್ತು ಕಂಜಾರು ಗ್ರಾಮಗಳನ್ನು ಸೇರಿಸಿ ಬಜಪೆ ಪಟ್ಟಣ ಪಂಚಾಯಿತಿಯನ್ನು 2021ರ ಫೆ.19ರಂದು ರಚಿಸಲಾಗಿದೆ. ಬಜಪೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. ಬಜಪೆ ಗ್ರಾಮ ಪಂಚಾಯಿತಿಯಲ್ಲಿ 8 ವಾರ್ಡ್‌ಗಳಲ್ಲಿ 25 ಸದಸ್ಯರಿದ್ದರು. ಅವರಲ್ಲಿ ಮಳವೂರು–ಕೆಂಜಾರು ಗ್ರಾಮ ಪಂಚಾಯಿತಿಯಲ್ಲಿ ಏಳು ವಾರ್ಡ್‌ಗಳಲ್ಲಿ 23 ಸದಸ್ಯರಿದ್ದರು. ಮಳವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಾಬಲ್ಯವಿತ್ತು. ಕೆಲವು ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಬಲಿಷ್ಠವಾಗಿದೆ. ಆಮ್ ಆದ್ಮಿ ಪಾರ್ಟಿ ಕಲ್ಲಝರಿ ವಾರ್ಡ್‌ನಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪಟ್ಟಣ ಪಂಚಾಯಿತಿ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಪಕ್ಷಗಳ ಬಲಾಬಲ ಪರೀಕ್ಷೆಯ ವೇದಿಕೆಯಾಗಿ ಮಾರ್ಪಟ್ಟಿದೆ.
ಬಜಪೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸುರೇಂದ್ರ ಪೆರ್ಗಡೆ, ಮಳವೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ ಅರ್ಬಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ರಿತೇಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಪ್ರೀತಾ ಶೆಟ್ಟಿ ಮತ್ತಿತರರು ಕಣದಲ್ಲಿದ್ದಾರೆ.
ಕೆಲವೆಡೆ ತ್ರಿಕೋನ ಸ್ಪರ್ಧೆ
ಸಾಮಾನ್ಯ ಅಭ್ಯರ್ಥಿಗೆ ಮೀಸಲಿರುವ ಬಜಪೆಯ ಶಾಂತಿಗುಡ್ಡೆ ವಾರ್ಡ್‌ನಲ್ಲಿ ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್, ಬಿಜೆಪಿ ಮುಖಂಡ ರಿತೇಶ್ ಶೆಟ್ಟಿ ಹಾಗೂ ಎಸ್‌ಡಿಪಿಐ ಮುಖಂಡ ರಫೀಕ್ ಕಣದಲ್ಲಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಹಿಂದುಳಿದ ವರ್ಗ ಎಗೆ ಮೀಸಲಾಗಿರುವ ಮುಂಡಾರು ವಾರ್ಡ್‌ನಲ್ಲೂ ಬಿಜೆಪಿಯಿಂದ ಜಯಂತ್, ಕಾಂಗ್ರೆಸ್‌ನಿಂದ ಶಾಫಿ ಹಾಗೂ ಎಸ್‌ಡಿಪಿಐನಿಂದ ನಜೀರ್ ಕಣದಲ್ಲಿದ್ದು, ಇಲ್ಲೂ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ ಮತದಾರರೇ ಜಾಸ್ತಿ. ಕೆಲವು ವಾರ್ಡ್‌ಗಳಲ್ಲಿ ಮುಸ್ಲಿಮರ ಹಾಗೂ ಕ್ರೈಸ್ತರ ಪ್ರಾಬಲ್ಯ ಇದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎಂಆರ್‌ಪಿಎಲ್‌ನಂತಹ ಭಾರಿ ಕೈಗಾರಿಕೆಯ ಸೆರಗಿನಲ್ಲೇ ಇರುವ ಪ್ರದೇಶಗಳು ಬಜಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಮಂಗಳೂರಿನಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಸತಿ ಪ್ರದೇಶಗಳು ಹೆಚ್ಚುತ್ತಲೇ ಇವೆ. 2011ರ ಜನಗಣತಿ ಪ್ರಕಾರ ಬಜಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ 18,507. ಆದರೆ ಜಿಲ್ಲಾಡಳಿತದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಇಲ್ಲಿನ ಜನಸಂಖ್ಯೆ 23 ಸಾವಿರ ದಾಟಿದೆ.
ಜನಸಂಖ್ಯೆ: 18507 (2011ರ ಜನಗಣತಿ ಪ್ರಕಾರ)
ಪ್ರದೇಶ: 20.02 ಚ.ಕಿ.ಮೀ
ವಾರ್ಡ್‌ಗಳು: 19
ಮತದಾನ: ಡಿ.21ರಂದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.