ADVERTISEMENT

ಫೆ. 9ರಂದು ಕುಡ್ಲ ತುಳು ಕೂಟದ ‘ಬಂಗಾರ್‌ ಪರ್ಬ‘

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 12:42 IST
Last Updated 1 ಮಾರ್ಚ್ 2025, 12:42 IST
ಕುಡ್ಲ ತುಳು ಕೂಟದ ಸುವರ್ಣ ಮಹೋತ್ಸವ ‘ಬಂಗಾರ್‌ ಪರ್ಬ’ ಕುರಿತು ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಹಿತಿ ನೀಡಿದರು
ಕುಡ್ಲ ತುಳು ಕೂಟದ ಸುವರ್ಣ ಮಹೋತ್ಸವ ‘ಬಂಗಾರ್‌ ಪರ್ಬ’ ಕುರಿತು ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಹಿತಿ ನೀಡಿದರು   

ಮಂಗಳೂರು: ಕುಡ್ಲ ತುಳು ಕೂಟದ ಸುವರ್ಣ ಮಹೋತ್ಸವ ‘ಬಂಗಾರ್‌ ಪರ್ಬ’ ಇದೇ 9ರಂದು ನಗರದ ಪುರಭವನದಲ್ಲಿ ನಡೆಯಲಿದೆ.

ಬೆಳಿಗ್ಗೆ 9ರಿಂದ ರಾತ್ರಿ 9.30ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು, ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ವರ್ಕಾಡಿ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತುಳು ಭಾಷೆ, ಸಂಸ್ಕೃತಿ ಕಾಪಿಟ್ಟುಕೊಳ್ಳುವಲ್ಲಿ ತುಳುಕೂಟ ಕುಡ್ಲ 54 ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತ ಬಂದಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿ ಸಂವಿಧಾನದ ಮಾನ್ಯತೆ ನೀಡಬೇಕು ಹಾಗೂ ರಾಜ್ಯ ಸರ್ಕಾರ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ತುಳುಗೆ ಮಾನ್ಯತೆ ನೀಡಬೇಕು ಎಂಬ ಒತ್ತಾಯವನ್ನೂ ಈ ಉತ್ಸವದ ಮೂಲಕ ಮಾಡಲಾಗುವುದು ಎಂದರು.

ADVERTISEMENT

9ರಂದು ಬೆಳಿಗ್ಗೆ 9ರಿಂದ 10ರ ವರೆಗೆ ಮಂಗಳೂರು ತುಳು ವರ್ಲ್ಡ್‌ ಫೌಂಡೇಶನ್‌ನಿಂದ ಪಾಡ್ಡನ ಮೇಳ ನಡೆಯಲಿದೆ. 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಉದ್ಘಾಟಿಸುವರು. ಧರ್ಮದರ್ಶಿ ಹರಿಕೃಷ್ಣ ಪುನರೂರು ದೀಪ ಪ್ರಜ್ವಲನೆ ಮಾಡುವರು. ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಮಾಜಿ ಮೇಯರ್‌ ಮನೋಜ್‌ ಕುಮಾರ್‌, ಶಾಸಕರಾದ ಡಿ.ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ ಹಾಗೂ ಗಣ್ಯರು ಉಪಸ್ಥಿತರಿರುವರು.

11.30ರಿಂದ ತುಳು ವಿಚಾರಗೋಷ್ಠಿ ನಡೆಯಲಿದ್ದು, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಮತ್ತು ವರ್ಧಮಾನ ದುರ್ಗಾಪ್ರಸಾದ್‌ ಶೆಟ್ಟಿ ಸಂವಾದಕಾರರಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 1ಕ್ಕೆ ‘ಯಕ್ಷಮಣಿ‘ ಮಹಿಳಾ ತಾಳಮದ್ದಳೆ. ಮಧ್ಯಾಹ್ನ 2.15ಕ್ಕೆ ‘ಬೆಂಗಳೂರಿನ ದ ವಾಯ್ಸ್‌ ಆಫ್‌ ಓಷ್ಯನ್‌’ ತಂಡದಿಂದ ‘ಐಲೇಸಾ‘ ಎಂಬ ತುಳು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸಮಾರೋಪ ಭಾಷಣ ಮಾಡುವರು. ಜನಪ್ರತಿನಿಧಿಗಳು, ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರಗಳಲ್ಲಿ ದುಡಿದ ಹಿರಿಯರನ್ನು ಸನ್ಮಾನಿಸಲಾಗುವುದು. ‘ಬಂಗಾರ ಪಿಂಗಾರ‘ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು.  ಸಂಜೆ 6ಕ್ಕೆ ‘ರೆಂಜೆ ಬನೊತ ಲೆಕ್ಕಸಿರಿ’ ತುಳು ಯಕ್ಷಗಾನ. ರಾತ್ರಿ 7.30ರಿಂದ ‘ದೈವೊದ ಬೂಳ್ಯ’ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತುಳು ಕೂಟದ ಉಪಾಧ್ಯಕ್ಷರಾದ ಜೆ.ವಿ. ಶೆಟ್ಟಿ, ಬಿ.ಪದ್ಮನಾಭ ಕೋಟ್ಯಾನ್‌ ಪೆಲತ್ತಡಿ, ಖಜಾಂಚಿ ಚಂದ್ರಶೇಖರ ಸುವರ್ಣ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.