
ಬಂಟ್ವಾಳ: ತಾಲ್ಲೂಕಿನ 51 ಗ್ರಾಮ ಪಂಚಾಯಿತಿಗಳ ಪೈಕಿ ಸರ್ಕಾರದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮೂರು ಗ್ರಾಮ ಪಂಚಾಯಿತಿಗಳ ನಡುವೆ ಭಾರಿ ಪೈಪೋಟಿ ನಡೆದಿದ್ದು, ಈ ಪೈಕಿ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಹೆಚ್ಚು ಅಂಕ ಗಳಿಸುವ ಮೂಲಕ ತಾಲ್ಲೂಕಿನಿಂದ ಆಯ್ಕೆಗೊಂಡಿದೆ ಎಂದು ತಾಲ್ಲೂಕು ಪಂಚಾಯಿತಿ ಮ್ಯಾನೇಜರ್ ಪ್ರಕಾಶ್ ತಿಳಿಸಿದ್ದಾರೆ.
ಇಲ್ಲಿನ ಕಾವಳಪಡೂರು ಮತ್ತು ಅನಂತಾಡಿ ಗ್ರಾಮ ಪಂಚಾಯಿತಿಗಿಂತ ಹೆಚ್ಚು ಅಂಕ ಗಳಿಸುವ ಮೂಲಕ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ತಾಲ್ಲೂಕು ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಬಗ್ಗೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ದಾಖಲೆಪತ್ರ ಹಸ್ತಾಂತರಿಸಲಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಗಾಂಧಿ ಗ್ರಾಮ ಪುರಸ್ಕಾರ ಯೋಜನೆಗೆ ಅ.14ರಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ, ಎಲ್ಲಾ ಪಂಚಾಯಿತಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ರಾಜ್ಯದಲ್ಲಿ ಅತ್ಯುತ್ತಮ ಕಾರ್ಯ ಸಾಧನೆ ಮಾಡಿದ ಪಂಚಾಯಿತಿಗಳನ್ನು ಪ್ರತಿ ತಾಲ್ಲೂಕಿಗೆ ಒಂದರಂತೆ ಗುರುತಿಸಿ, ಗಾಂಧಿ ಗ್ರಾಮ ಪುರಸ್ಕಾರ ಸಹಿತ ಪ್ರೋತ್ಸಾಹಧನ ನೀಡಿ ಗೌರವಿಸಲಾಗುತ್ತಿದೆ.
ಪ್ರತಿ ವಿಭಾಗ ಮಟ್ಟದದಲ್ಲಿ (12 ಗ್ರಾ.ಪಂ.) ಅತ್ಯುತ್ತಮ ಸಾಧನೆ ಮಾಡಿದ ಮೂರು ಗ್ರಾಮ ಪಂಚಾಯಿತಿಗಳ ಪೈಕಿ ಪ್ರಥಮ ಸ್ಥಾನಕ್ಕೆ ₹ 15 ಲಕ್ಷ, ದ್ವಿತೀಯ ಸ್ಥಾನ ಪಡೆದ ಪಂಚಾಯಿತಿಗೆ ₹ 12 ಲಕ್ಷ, ತೃತೀಯ ಸ್ಥಾನಕ್ಕೆ ₹ 10 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಒಂದು ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಸಹಿತ ₹ 8 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಪಂಚಾಯಿತಿಗೆ ₹ 4 ಲಕ್ಷ ಪ್ರೋತ್ಸಾಹಧನ ಸಹಿತ ಗಾಂಧಿ ಗ್ರಾಮ ಪುರಸ್ಕಾರ ಸಿಗಲಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಹಲವು ಪಂಚಾಯಿತಿಗಳು ಅರ್ಜಿ ಸಲ್ಲಿಸಿದ್ದರೂ ದಾಖಲೆಪತ್ರ ಸಿದ್ಧಪಡಿಸಿಕೊಂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಈ ಹಿಂದೆ ಕಡೇಶ್ವಾಲ್ಯ ಮತ್ತು ಬರಿಮಾರು ಗ್ರಾಮಗಳು ಒಂದೇ ಪಂಚಾಯಿತಿನಲ್ಲಿದ್ದು, 2015ರಲ್ಲಿ ಬರಿಮಾರು ಪಂಚಾಯಿತಿ ಪ್ರತ್ಯೇಕಗೊಂಡಿದೆ. ಎರಡು ವರ್ಷಗಳಲ್ಲಿ ಸತತ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದ್ದ ಕಡೇಶ್ವಾಲ್ಯ ಪಂಚಾಯಿತಿ ಈ ಬಾರಿ ಮೂರನೇ ಬಾರಿಗೆ ಆಯ್ಕೆ ನಿರೀಕ್ಷೆಯಲ್ಲಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಬಳಿಕವಷ್ಟೇ ಅಧಿಕೃತ ಘೋಷಣೆಯಾಗಲಿದೆ.
ಈಗಾಗಲೇ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸ್ವಚ್ಛ ಸಂಕೀರ್ಣ ಘಟಕ (ತ್ಯಾಜ್ಯ ಸಂಸ್ಕರಣೆ) ಎರಡನೇ ಸ್ಥಾನ, ಡಾ.ಶಿವರಾಮ ಕಾರಂತ ಪ್ರಶಸ್ತಿ, ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ ₹ 7 ಲಕ್ಷ, ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ₹ 25ಲಕ್ಷ ಅನುದಾನ ದೊರೆತಿದ್ದು, ಇದರಿಂದಾಗಿ ಕಳೆದ ವರ್ಷವಷ್ಟೇ ₹ 70 ಲಕ್ಷ ವೆಚ್ಚದಲ್ಲಿ ಪಂಚಾಯಿತಿಗೆ ಪ್ರಗತಿ ಸೌಧ ಕಟ್ಟಡ ನಿರ್ಮಿಸಿದೆ ಎಂದು ಪಿಡಿಒ ಸುನಿಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.