ADVERTISEMENT

ಮಂಗಳೂರು | ಬೀಡಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:38 IST
Last Updated 10 ಅಕ್ಟೋಬರ್ 2025, 6:38 IST
ಕೈಕಂಬದಲ್ಲಿರುವ ಟೆಲಿಫೋನ್ ಬೀಡಿ ಡಿಪೊ ಎದುರು ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು
ಕೈಕಂಬದಲ್ಲಿರುವ ಟೆಲಿಫೋನ್ ಬೀಡಿ ಡಿಪೊ ಎದುರು ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು   

ಮಂಗಳೂರು: 2018 ರಿಂದ 2024ರ ವರೆಗಿನ ಬಾಕಿ ಉಳಿಸಿರುವ ಕನಿಷ್ಠ ವೇತನ, 2024ರಲ್ಲಿ ಹೆಚ್ಚಳಗೊಂಡಿರುವ ತುಟ್ಟಿಭತ್ಯೆ ಪಾವತಿಗೆ ಒತ್ತಾಯಿಸಿ ಕೈಕಂಬದಲ್ಲಿರುವ ಟೆಲಿಫೋನ್ ಬೀಡಿ ಡಿಪೊಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ, ಗುರುಪುರ, ಸುರತ್ಕಲ್ ಬೀಡಿ ಲೇಬರ್ ಯೂನಿಯನ್, ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘ ಜಂಟಿಯಾಗಿ ನಡೆಸಿದ ಈ ಪ್ರತಿಭಟನೆಯಲ್ಲಿ ಮಹಿಳಾ ಬೀಡಿ ಕಾರ್ಮಿಕರು ಉರಿ ಬಿಸಿಲನ್ನೂ ಲೆಕ್ಕಿಸದೆ ಭಾಗವಹಿಸಿದ್ದರು.

‘2018ರಲ್ಲಿ ತ್ರಿಪಕ್ಷೀಯ ಮಾತುಕತೆಯ ಆಧಾರದಲ್ಲಿ ಸರ್ಕಾರ ₹40 ಹೆಚ್ಚಿಸಿ ಕನಿಷ್ಠ ಕೂಲಿ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಮಾಲೀಕರು ಈ ಆದೇಶವನ್ನು ಜಾರಿಗೊಳಿಸದೆ ಕಾರ್ಮಿಕರನ್ನು ವಂಚಿಸುತ್ತಾ ಬಂದಿದ್ದಾರೆ. ತರುವಾಯ 2024ರಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಲೀಕರ ಪರವಾಗಿ ಹಿಮ್ಮುಖವಾಗಿ  ಕೂಲಿ ನಿಗದಿಗೊಳಿಸಿದರು. ಕನಿಷ್ಠ ಕೂಲಿ ಕಡಿತಗೊಳಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸಲಾಯಿತು’ ಎಂದು ಮುಖಂಡರು ದೂರಿದರು.

ADVERTISEMENT

‘ಮಾಲೀಕರ ಪರವಾಗಿ ಹಿಮ್ಮುಖವಾಗಿ ಹೊರಡಿಸಲಾದ ಆದೇಶವನ್ನೂ ಬೀಡಿ ಮಾಲೀಕರು ಜಾರಿಗೊಳಿಸಿಲ್ಲ. ಕಾರ್ಮಿಕರ ಬಾಕಿ ವೇತನ ಪಾವತಿಸುತ್ತಿಲ್ಲ. ಹೀಗಾಗಿ ಬೀಡಿ ಮಜೂರರ ಸಂಘಗಳು ಹೋರಾಟವನ್ನು ತೀವ್ರಗೊಳಿಸಿದ್ದು, ಜಿಲ್ಲೆಯಾದ್ಯಂತ ಮಾಲೀಕರ ಡಿಪೊಗಳ ಮುಂಭಾಗದಲ್ಲಿ ಸರಣಿಯಾಗಿ ಪ್ರತಿಭಟನೆ, ಮುತ್ತಿಗೆ ಹೋರಾಟ ನಡೆಸುತ್ತಿವೆ’ ಎಂದು ಅವರು ಹೇಳಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ವಸಂತ ಆಚಾರಿ, ಬಿ.ಶೇಖರ್, ಮುನೀರ್ ಕಾಟಿಪಳ್ಳ, ಬಾಲಕೃಷ್ಣ ಶೆಟ್ಟಿ, ಸದಾಶಿವ ದಾಸ್, ಸೀತಾರಾಮ ಬೇರಿಂಜೆ ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯ ಬೀಡಿ ಮಜೂರರ ಸಂಘದ ಪದಾಧಿಕಾರಿಗಳಾದ ಯಶೋಧ ಮಳಲಿ, ಭವಾನಿ ವಾಮಂಜೂರು, ಹೊನ್ನಯ್ಯ ಅಮೀನ್ ವಾಮಂಜೂರು, ಕುಸುಮ ಕುಪ್ಪೆಪದವು, ವಾರಿಜ ಕುಪ್ಪೆಪದವು, ಅಶೋಕ ವಾಮಂಜೂರು ಮತ್ತಿತರರು ವಹಿಸಿದ್ದರು. ನೋಣಯ್ಯ ಗೌಡ ಸ್ವಾಗತಿಸಿದರು. ವಸಂತಿ ಕುಪ್ಪೆಪದವು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.