ಬೆಳ್ತಂಗಡಿ: ಏಳು ವರ್ಷಗಳ ಹಿಂದೆ ಪಟ್ಟಣಕ್ಕೆ ಒದಗಿಸಿದ ₹ 10 ಕೋಟಿ ವೆಚ್ಚದ 33 ಕಾಮಗಾರಿಗಳ ಪೈಕಿ ಬಹುತೇಕ ಕಾಮಗಾರಿಗಳನ್ನು ಕಳಪೆಯಾಗಿ ನಡೆಸಿರುವುದು, ಉಳಿದ ಕಾಮಗಾರಿ ನಡೆಸದೆ ಸಾಮಾನ್ಯ ಸಭೆಗೆ ಗೈರಾಗಿರುವ ಕೆಆರ್‌ಐಡಿಎಲ್, ನಿರ್ಮಿತಿ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಮುಂದಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಜಯಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರದ ಕಾಮಗಾರಿಗೆ ಸಂಬಂಧಿಸಿ ಚರ್ಚೆ ನಡೆದಾಗ, ಶಾಸಕ ಹರೀಶ್ ಪೂಂಜ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಗೆ ಮೊದಲ ಬಾರಿಗೆ ಹಾಜರಾಗಿದ್ದ ಅಧಿಕಾರಿ ಮಾಹಿತಿ ನೀಡಿ, ₹ 10 ಕೋಟಿ ಅನುದಾನದಲ್ಲಿ ₹ 4.50 ಕೋಟಿ ಅನುದಾನ ಬಿಡುಗಡೆಯಾಗಲು ಬಾಕಿ ಇದೆ. ಹಾಗಾಗಿ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿಸಿದರು.
ಸದಸ್ಯ ಜಗದೀಶ್ ಮಾತನಾಡಿ, ಅಧಿಕಾರಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. 33 ಕಾಮಗಾರಿಗಳ ಪೈಕಿ ಮಾಡಿರುವ ಕಾಮಗಾರಿಯ ಗುಣಮಟ್ಟ ಕಾಪಾಡಿಲ್ಲ. ಈ ಸಂಬಂಧ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡುವಂತೆ ಕೇಳಿದರೂ ಸಭೆಗೆ ಬಂದಿಲ್ಲ ಎಂದು ಆರೋಪಿಸಿದರು.
ಮಧ್ಯ ಪ್ರವೇಶಿಸಿದ ಶಾಸಕ, ಸರ್ಕಾರ ಶೇ 30 ಅನುದಾನಕ್ಕೆ ಅನುಮೋದನೆ ನೀಡುತ್ತದೆ. ಹಾಗಾಗಿ ವಿಳಂಬವಾಗಿರಬಹುದು. ಆದರೆ, ಈಗಾಗಲೆ ಕೈಗೊಂಡ ಎಲ್ಲ ಕಾಮಗಾರಿಗಳ ಕುರಿತು ಇತರ ಇಲಾಖೆ ಎಂಜಿನಿಯರ್‌ಗಳನ್ನು ನೇಮಿಸಿ ಗುಣಮಟ್ಟ ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು. ಕೆಲಸ ಕಳಪೆ ಎಂದಾದರೆ ಜಿಲ್ಲಾಧಿಕಾರಿ ಗಮನಕ್ಕೆ ತರೋಣ. ಜತೆಗೆ ಕಾಮಗಾರಿ ವಿಚಾರವಾಗಿ ನಾನೂ ಸದನದಲ್ಲಿ ಧ್ವನಿ ಎತ್ತುವೆ ಎಂದು ಭರವಸೆ ನೀಡಿದರು.
ಮೂಡ ಸಮಸ್ಯೆ, ಸಂತೆಕಟ್ಟೆ ಒಳಭಾಗದಲ್ಲಿರುವ ಒಣಮೀನು ಮಾರಾಟದ ಅಂಗಡಿ, ಬಾಡಿಗೆದಾರರು ಗೋಡೆ ತೆರವುಗೊಳಿಸಿರುವುದು, ಸಂತೆಮಾರುಕಟ್ಟೆಯಲ್ಲಿ ಸೋರಿಕೆ ಬಗ್ಗೆ ಚರ್ಚೆ ನಡೆಯಿತು.
ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿರುವ 8 ಹಾಸಿಗೆ ಪೈಕಿ ಒಂದು ಹಾಸಿಗೆಗಷ್ಟೆ ಸೊಳ್ಳೆ ಪರದೆ ಇದೆ. ಎಲ್ಲ ಹಾಸಿಗೆಗೂ ಸೊಳ್ಳೆ ಪರದೆ ಅಳವಡಿಸಬೇಕು ಎಂದು ಸದಸ್ಯ ಜಗದೀಶ್ ಆಗ್ರಹಿಸಿದರು.
ತಕ್ಷಣ ಅಳವಡಿಸುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಪಟ್ಟಣ ಪಂಚಾಯಿತಿ ಸದಸ್ಯರು ಆರ್ಥಿಕವಾಗಿ ಸದೃಢರಲ್ಲ, ಹಾಗಾಗಿ ಗೌರವಧನ ಏರಿಕೆಗೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರದ ಶಾಸಕರು ಸರ್ಕಾರದ ಗಮನಹರಿಸಿಲ್ಲ ಎಂಬ ಬೇಸರವಿದೆ ಎಂದು ಸದಸ್ಯ ಜಗದೀಶ್ ಶಾಸಕರ ಗಮನಕ್ಕೆ ತಂದರು. ರಾಜ್ಯದ ಎಲ್ಲ ಪ.ಪಂ. ಸದಸ್ಯರ ಗೌರವಧನ ಹೆಚ್ಚಿಸುವಲ್ಲಿ ಸದನದ ಗಮನ ಸೆಳೆಯುವುದಾಗಿ ಶಾಸಕ ತಿಳಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿರುವ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ನೀಡಿದ ₹ 2.50 ಲಕ್ಷ ಸಹಾಯಧನದ ಚೆಕ್‌ಅನ್ನು ಶಾಸಕರ ಮೂಲಕ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಅವರಿಗೆ ಹಸ್ತಾಂತರಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ, ಮುಖ್ಯಾಧಿಕಾರಿ ರಾಜೇಶ್ ಕೆ., ಯೋಜನಾಧಿಕಾರಿ ಯಶೋಧರ, ಲಾಯಿಲ ವಲಯ ಮೇಲ್ವಿಚಾರಕ ಶುಶಾಂತ್, ರವಿ, ಕೇಂದ್ರ ಒಕ್ಕೂಟ ಅಧ್ಯಕ್ಷ ಸೀತಾರಾಮ್ ಆರ್., ಒಕ್ಕೂಟ ಪದಾಧಿಕಾರಿಗಳಾದ ದಯಾನಂದ್ ಕೋಟ್ಯಾನ್, ಯಶೋದಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.