
ಬೆಳ್ತಂಗಡಿ: ‘ತಾಲ್ಲೂಕಿನ ಉಜಿರೆ ಗ್ರಾಮದ ಸ.ನಂಬ್ರ 406/1ರ ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿ ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ವೆಂಕಪ್ಪ ಅವರ ಪತ್ನಿ ರಾಜೀವಿ ಎಂಬುವರ ಮನೆಯನ್ನು ಸ್ಥಳೀಯ ಓಡಲ ನಿವಾಸಿ ಶೇಕ್ ರಫೀಕ್ ಎಂಬುವರು ಶುಕ್ರವಾರ ಸಂಪೂರ್ಣವಾಗಿ ಕೆಡವಿ ಮನೆಯ
ಸ್ವತ್ತುಗಳನ್ನು ಬೀದಿಗೆಸೆದ ಘಟನೆ ನಡೆದಿದೆ.
ರಾಜೀವಿ ಈ ಮನೆಯಲ್ಲಿ ಪತಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು. ಅಲ್ಲಿ ಅಡಿಕೆ ಮತ್ತು ತೆಂಗು ಕೃಷಿಯನ್ನೂ ಮಾಡಿಕೊಂಡಿದ್ದರು. ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಫೀಕ್ ಎಂಬುವರು ಅಕ್ರಮವಾಗಿ ಪ್ರವೇಶಿಸಿ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ. ಮನೆಯಲ್ಲಿದ್ದ ಟಿ.ವಿ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣ, ಬಟ್ಟೆ, ದಿನಸಿ ಸಾಮಗ್ರಿಯನ್ನು ಮನೆಯಿಂದ ಬೀದಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ದಂಪತಿಯ ಪುತ್ರಿ ಸ್ಥಳಕ್ಕೆ ಧಾವಿಸಿ ಘಟನೆಯನ್ನು ಚಿತ್ರೀಕರಿಸಲು ಮುಂದಾದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ.
ಭಯಗೊಂಡ ಬಾಲಕಿ ಅಳುತ್ತಿದ್ದ ಸಂದರ್ಭ ಸ್ಥಳೀಯ ತ್ಯಾಗರಾಜ್ ಮತ್ತು ಜಯ ಅವರು ಧಾವಿಸಿ ಈ ಬಗ್ಗೆ ಪ್ರಶ್ನಿಸಿದಾಗ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಘಟನೆಯ ದೃಶ್ಯ, ಸಹಿತ ಫೊಟೊ ಇರುವ ಪೆನ್‌ಡ್ರೈವನ್ನು ದೂರಿನ ಜೊತೆಗೆ ಪೊಲೀಸರಿಗೆ ಸಲ್ಲಿಸಿದ್ದಾರೆ.
ನಮಗೆ ₹ 10 ಲಕ್ಷ ನಷ್ಟ ಉಂಟಾಗಿದೆ ಎಂದು ರಾಜೀವಿ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.