ADVERTISEMENT

ಭಾರತ್‌ ಜೋಡೊ ಯಾತ್ರೆಗೆ ಜಿಲ್ಲೆಯಿಂದ 10 ಸಾವಿರ ಜನ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 14:57 IST
Last Updated 17 ಸೆಪ್ಟೆಂಬರ್ 2022, 14:57 IST
ಸಭೆಯಲ್ಲಿ ಹರೀಶ್‌ ಕುಮಾರ್‌ ಮಾತನಾಡಿದರು. ಮಮತಾ ಗಟ್ಟಿ, ರಕ್ಷಿತ್‌ ಶಿವರಾಂ, ಐ‌ವನ್‌ ಡಿಸೋಜಾ, ಬಿ.ರಮಾನಾಥ ರೈ, ಮಂಜುನಾಥ ಭಂಡಾರಿ, ಜೆ.ಆರ್‌.ಲೋಬೊ, ಇನಾಯತ್‌ ಅಲಿ ಇದ್ದಾರೆ
ಸಭೆಯಲ್ಲಿ ಹರೀಶ್‌ ಕುಮಾರ್‌ ಮಾತನಾಡಿದರು. ಮಮತಾ ಗಟ್ಟಿ, ರಕ್ಷಿತ್‌ ಶಿವರಾಂ, ಐ‌ವನ್‌ ಡಿಸೋಜಾ, ಬಿ.ರಮಾನಾಥ ರೈ, ಮಂಜುನಾಥ ಭಂಡಾರಿ, ಜೆ.ಆರ್‌.ಲೋಬೊ, ಇನಾಯತ್‌ ಅಲಿ ಇದ್ದಾರೆ   

ಮಂಗಳೂರು: ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ತಿಳಿಸಿದರು.

ಭಾರತ್ ಜೋಡೊ ಯಾತ್ರೆಗೆ ಜಿಲ್ಲೆಯಿಂದ ಕಾರ್ಯಕರ್ತರನ್ನು ಕಳುಹಿಸಿಕೊಡುವ ಹಾಗೂ ಇದೇ 26ರಂದು ನಗರದ ಕುದ್ಮುಲ್ ರಂಗರಾವ್ ಪುರಭನದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಯಶಸ್ವಿಗೊಳಿಸುವ ಸಲುವಾಗಿ ಶನಿವಾರ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಭಾರತ್‌ ಜೋಡೊ ಯಾತ್ರೆಯಲ್ಲಿ ಇದೇ 30ರಂದು ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೂ ಬಂಟ್ವಾಳ ಕ್ಷೇತ್ರಗಳಿಂದ ಒಟ್ಟು 5 ಸಾವಿರ ಮಂದಿ ಭಾಗವಹಿಸಬೇಕು. ಅ. 2ರಂದು ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಮೂಡುಬಿದಿರೆ ಕ್ಷೇತ್ರಗಳಿಂದ 5 ಸಾವಿರ ಮಂದಿಯಾದರೂ ಭಾಗವಹಿಸಬೇಕು. ಆಯಾ ಕ್ಷೇತ್ರಗಳ ಶಾಸಕರು ಹಾಗೂ ಮಾಜಿ ಶಾಸಕರು ಕಾರ್ಯಕರ್ತರನ್ನು ಕರೆದೊಯ್ಯುವ ಉಸ್ತುವಾರಿ ನೊಡಿಕೊಳ್ಳಬೇಕು’ ಎಂದು ಅವರು ಸೂಚಿಸಿದರು.

ADVERTISEMENT

‘ಇದೇ 26ರಂದು ಪುರಭವನದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಸುಮಾರು 3 ಸಾವಿರ ಮಂದಿ ಸೇರಿಲಿದ್ದಾರೆ. ಪ್ರತಿಯೊಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ನಾಯಕರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಬಿ.ರಮಾನಾಥ ರೈ, ಜೆ.ಆರ್.ಲೋಬೊ, ಐವನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ರಕ್ಷಿತ್ ಶಿವರಾಂ, ಮಮತಾ ಗಟ್ಟಿ ಸಲಹೆ ನೀಡಿದರು.

ಕೆಪಿಸಿಸಿ ಸಂಯೋಜಕರು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಪಕ್ಷದ ವಿವಿಧ ಘಟಕಗಳ ರಾಜ್ಯ ಪದಾಧಿಕಾರಿಗಳು, ಬ್ಲಾಕ್ ಉಸ್ತುವಾರಿಗಳು, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.