ADVERTISEMENT

ದಕ್ಷಿಣ ಕನ್ನಡ | ಸಮುದ್ರದ ಸಮೀಪದಲ್ಲಿ ಮಾಲಿನ್ಯದ ತೊಂದರೆ

ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹರಡಿಕೊಂಡಿರುವ ಬೈಕಂಪಾಡಿ ವಾರ್ಡ್‌ನ ಒಂದು ಭಾಗದಲ್ಲಿ ಸಮಸ್ಯೆಗಳ ಸರಮಾಲೆ

ವಿಕ್ರಂ ಕಾಂತಿಕೆರೆ
Published 7 ಅಕ್ಟೋಬರ್ 2025, 7:37 IST
Last Updated 7 ಅಕ್ಟೋಬರ್ 2025, 7:37 IST
ಬೈಕಂಪಾಡಿ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿರುವ ಮನೆಗಳಿಗೆ ದುರ್ನಾತ ಬೀರುವ ಕಾಲುವೆ
ಬೈಕಂಪಾಡಿ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿರುವ ಮನೆಗಳಿಗೆ ದುರ್ನಾತ ಬೀರುವ ಕಾಲುವೆ   

ಮಂಗಳೂರು: ಪಶ್ಚಿಮದಲ್ಲಿ ಭೋರ್ಗರೆಯುವ ಸಮುದ್ರ. ಅದಕ್ಕೆ ಹೊಂದಿಕೊಂಡೇ ರಾಷ್ಟ್ರೀಯ ಹೆದ್ದಾರಿ. ಸುತ್ತಲೂ ಕೈಗಾರಿಕೆಗಳ ಸದ್ದು. ಸಮುದ್ರದ ದಂಡೆಯಲ್ಲಿ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು, ನೋಡಿದಲ್ಲೆಲ್ಲ ಅಭಿವೃದ್ಧಿ ಕಾಮಗಾರಿಗಳು...

ನಗರದ ಪ್ರಮುಖ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ಮತ್ತು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಬೈಕಂಪಾಡಿ ವಾರ್ಡ್‌ನ ಕೆಲವು ಪ್ರದೇಶಗಳಲ್ಲಿ ಜನರ ಜೀವನ ಮಟ್ಟ ಸುಧಾರಿಸಿದ್ದರೂ ಕೆಲವು ಪ್ರದೇಶಗಳ ಜನರು ಇನ್ನೂ ಉಸಿರು ಕಟ್ಟಿಸುವ ವಾತಾವರಣದಲ್ಲಿ ದಿನ ದೂಡುತ್ತಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಶಬ್ದ, ದೂಳು ಮತ್ತಿತರ ಮಾಲಿನ್ಯದ ಸಮಸ್ಯೆಯಾದರೆ ಸಮುದ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಚರಂಡಿ ಮತ್ತು ತ್ಯಾಜ್ಯದ ಸಮಸ್ಯೆ ಕಾಡುತ್ತಿದೆ. 

ಕುಳಾಯಿಯಿಂದ ಪಣಂಬೂರು ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಿಸಿಕೊಂಡಿರುವ ಬೈಕಂಪಾಡಿ ವಾರ್ಡ್‌ನಲ್ಲಿ ಪಣಂಬೂರು ಮತ್ತು ಕೂರಿಕಟ್ಟೆ ಕಡೆಗೆ ಹೋಗುವ ದಾರಿಯುದ್ದಕ್ಕೂ ದೊಡ್ಡಮಟ್ಟದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ದೂಳು ಮತ್ತು ತ್ಯಾಜ್ಯದ ಸಮಸ್ಯೆಯೊಂದಿಗೆ ಈ ಕಾಮಗಾರಿಯ ಕಿರಿಕಿರಿಯೂ ಜನರನ್ನು ಕಾಡುತ್ತಿದೆ. ಸಮುದ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಚರಂಡಿಗಳದ್ದೇ ಮಾತು. ತೋಕೂರು ಕಡೆಯಿಂದ ಹರಿದು ಬರುವ ದೊಡ್ಡ ಮೋರಿಯೊಂದು ಈ ಭಾಗದಲ್ಲಿ ಸಾಗಿ ಸಮುದ್ರ ಸೇರುತ್ತದೆ. ಮೇಲ್ಭಾಗದಿಂದ ಹೊತ್ತು ತರುವ ಕೊಳೆಯೊಂದಿಗೆ ಸ್ಥಳೀಯರು ಎಸೆಯುವ ತ್ಯಾಜ್ಯವೂ ಸೇರಿ ಇದು ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇಲ್ಲಿನ ಕೊಳಕು ನೀರು ಸಮುದ್ರ ಸೇರುವುದಿಲ್ಲ. ಹೀಗಾಗಿ ಕಟ್ಟಿನಿಲ್ಲುವ ನೀರಿನಿಂದಾಗಿ ಪರಿಸರವಿಡೀ ದುರ್ವಾಸನೆಯಿಂದ ಕೂಡಿದೆ.

ADVERTISEMENT

‘ಇದು ಹಲವು ವರ್ಷಗಳ ಸಮಸ್ಯೆ. ಮೇಲ್ಭಾಗದ ತೋಡಿನಿಂದ ಹಿರುವ ನೀರು ಸಮುದ್ರ ಸೇರುವುದಕ್ಕಾಗಿ ಮಾಡಿದ್ದ ವ್ಯವಸ್ಥೆ ಇದು. ಹಿಂದೆಲ್ಲ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಈಗ ಸಮೀಪ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಹಲವು ಅಭಿವೃದ್ಧೀ ಚಟುವಟಿಕೆಗಳು ನಡೆದಿವೆ. ಕಾಲುವೆ ಸಮೀಪದಲ್ಲಿ ಮನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಆದ್ದರಿಂದ ನೀರು ಸಮುದ್ರ ಸೇರುವುದೇ ಇಲ್ಲ. ದುರ್ವಾಸನೆ ಮತ್ತು ಸೊಳ್ಳೆಗಳ ಕಾಟದಿಂದ ಬದುಕುವುದೇ ದುಸ್ತರವಾಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

‘ಸಮುದ್ರದಿಂದ ಬಂದು ಸೇರುವ ಮರಳು, ನೀರು ಹರಿಯದಂತೆ ಅಡ್ಡಿಮಾಡುತ್ತದೆ. ದೊಡ್ಟ ಪೈಪ್‌ಲೈನ್ ಅಳವಡಿಸಿ ವೈಜ್ಞಾನಿಕವಾಗಿ ಕಾಮಗಾರಿ ಮಾಡಿದರೆ ಸಮಸ್ಯೆ ಪರಿಹಾರ ಆಗಬಹುದು. ಇಲ್ಲವಾದರೆ ಇದೇ ಪರಿಸ್ಥಿತಿಯಲ್ಲಿ ಇಲ್ಲಿನವರು ಬದುಕಬೇದೀತು’ ಎಂದು ಸ್ಥಳೀಯ ನಿವಾಸಿ, ಮೀನುಗಾರ ಚೇತನ್ ಹೇಳಿದರು. 

ಈ ಕಾಲುವೆಯತ್ತ ಹರಿಯುವ ಸಣ್ಣ ಚರಂಡಿಗಳು ಕೂಡ ಸಮರ್ಪಕವಾಗಿಲ್ಲ. ಕೆಲವು ಕಡೆಗಳಲ್ಲಿ ನೀರು ಹರಿಯುವ ಜಾಗದಲ್ಲೇ ರಸ್ತೆಯನ್ನು ಎತ್ತರಿಸಿ ಕಾಂಕ್ರಿಟ್ ಹಾಕಲಾಗಿದೆ. ಆದರೆ ಚರಂಡಿಗೆ ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ ನೀರು ಉಕ್ಕಿ ರಸ್ತೆಮೇಲೆ ಹರಿದು ಮನೆಗಳತ್ತ ನುಗ್ಗುತ್ತದೆ ಎಂಬ ಆರೋಪ ಇದೆ. ಈ ಕುರಿತು ಪ್ರತಿಕ್ರಿಯೆಗೆ ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯೆ ಸುಮಿತ್ರಾ ಕರಿಯ ಲಭ್ಯವಾಗಲಿಲ್ಲ.
  

ಕಾಲುವೆಯ ನೀರು ಸಮುದ್ರ ಸೇರದೆ ಮನೆಗಳ ಬಳಿ ಕಟ್ಟಿ ನಿಂತಿರುವುದು

ಹೊರಗಿನವರ ಪಾರಮ್ಯ

ಕೈಗಾರಿಕೆಗಳು ಬೃಹತ್ ಉದ್ಯಮಗಳು ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ವ್ಯವಹಾರದಿಂದಾಗಿ ಬೈಕಂಪಾಡಿಯ ಕೆಲವು ಭಾಗಗಳಲ್ಲಿ ಹೊರರಾಜ್ಯದವರದೇ ಪಾರಮ್ಯ. ಉದ್ಯೋಗ ಅರಸಿ ಬಂದ ಉತ್ತರ ಭಾರತದವರು ಇಲ್ಲಿನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಮನೆಗಳಿಗೆ ಹೋಗಿ ಮಾತನಾಡಿದರೆ ಹಿಂದಿ ಬೋಲೋ (ಹಿಂದಿಯಲ್ಲಿ ಮಾತನಾಡಿ) ಎಂಬ ಫರ್ಮಾನು ಬರುತ್ತದೆ.  ಸಮುದ್ರಕ್ಕೆ ಹೊಂದಿಕೊಂಡು ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಇದ್ದು ಇವುಗಳಲ್ಲಿ ಹೆಚ್ಚಿನವುಗಳನ್ನು ಕೇರಳದವರು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಆದ್ದರಿಂದ ಈ ಭಾಗಗಳಲ್ಲಿ ಕೇರಳದ ವಾಹನಗಳೇ ನಿಂತಿರುತ್ತವೆ ಮಲಯಾಳಂ ಮಾತನಾಡುವವರೇ ತುಂಬಿರುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.