ADVERTISEMENT

ಕುದ್ರೋಳಿಯಿಂದ ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ಪಾದಯಾತ್ರೆ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 18:16 IST
Last Updated 4 ಜನವರಿ 2023, 18:16 IST
   

ಮಂಗಳೂರು: ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಲ್ಲಿನ ಗೋಕರ್ಣನಾಥ ಕ್ಷೇತ್ರದಿಂದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಇದೇ 6ರಂದು 41 ದಿನಗಳ ಪಾದಯಾತ್ರೆ ಆರಂಭವಾಗಲಿದೆ.

‘ಮಂಗಳೂರಿನಿಂದ ಹೊರಟು ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪುವ ಈ ಪಾದಾಯಾತ್ರೆ 658 ಕಿ.ಮೀ ಕ್ರಮಿಸಲಿದೆ. ಈ ಪಾದಯಾತ್ರೆಗೆ ಸಮುದಾಯದ ಮುಖಂಡ ಬಿ. ಜನಾರ್ದನ ಪೂಜಾರಿ, ತೆಲಂಗಾಣದ ಸಚಿವ ಶ್ರೀನಿವಾಸ ಗೌಡ್ ಚಾಲನೆ ನೀಡಲಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ಕೃಷಿಸಚಿವ ಜೋಗಿ ರಮೇಶ್, ಆಂಧ್ರಪ್ರದೇಶದ ರಾಜಮುಂಡ್ರಿ ಸಂಸದ ಮರ್ಗಣಿ ಭರತ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್ ಹಾಗೂ ಈ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳು ಭಾಗವಹಿಸುವರು’ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿ ₹ 500 ಕೋಟಿ ಅನುದಾನ ಮಂಜೂರು ಮಾಡಬೇಕು. ಕುಲಕಸುಬು ಸೇಂದಿ ನಿಷೇಧ ರದ್ದುಪಡಿಸಬೇಕು ಅಥವಾ ಈ ವೃತ್ತಿನಿರತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕು, ಸಾರಾಯಿ ಹಾಗೂ ಸೇಂದಿ ನಿಷೇಧದಿಂದ ನಿರ್ಗತಿಕರಾದ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಬೇಕು. ಪ್ರವರ್ಗ 2ರಲ್ಲಿರುವ ಜಾತಿಗಳಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡಬಾರದು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪಾದಯಾತ್ರೆಗೆ ಸ್ವಾಮಿ ಭದ್ರಾನಂದ ವಿರೋಧ

‘ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಚಿಂತನೆಗೆ ವಿರುದ್ಧವಾಗಿದೆ. ನಾರಾಯಣ ಗುರುಗಳ ತತ್ವಚಿಂತನೆಯನ್ನು ಅನುಸರಿಸುವ ಯಾರೂ ಈ ಪಾದಯಾತ್ರೆಯನ್ನು ಬೆಂಬಲಿಸಬಾರದು’ ಎಂದು ಸ್ವಾಮಿ ಭದ್ರಾನಂದ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ನಾರಾಯಣ ಗುರುಗಳು ಮದ್ಯಪಾನ, ಮದ್ಯ ಮಾರಾಟದ ವಿರೋಧಿಯಾಗಿದ್ದರು‌. ಆದರೆ ಪ್ರಣವಾನಂದರು ಶೇಂದಿ ಇಳಿಸುವುದನ್ನು ಪ್ರೋತ್ಸಾಹಿಸುವ ಮೂಲಕ ಬಿಲ್ಲವ ಸಮುದಾಯವನ್ನು ದಾರಿತಪ್ಪಿಸುತ್ತಿದ್ದಾರೆ’ ಎಂದರು.

‘ಮದ್ಯಸೇವನೆ ನಿಲ್ಲಿಸಲು ಅಥವಾ ಬಡತನ, ನಿರುದ್ಯೋಗ, ಕುಡಿಯುವ ನೀರಿಲನ ಅಲಭ್ಯತೆ, ಕೃಷಿ ಸಮಸ್ಯೆಗಳನ್ನು ಮುಂದಿರಿಸಿ ಪಾದಯಾತ್ರೆ ನಡೆಸುತ್ತಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಆದರೆ ಪ್ರಣವಾನಂದ ಸ್ವಾಮೀಜಿ ಶೇಂದಿ ಇಳಿಸಲು ಸರ್ಕಾರ ಅವಕಾಶ ಕೊಡಬೇಕೆಂದು ಹೇಳುವ ಮೂಲಕ ಬಿಲ್ಲವ ಸಮುದಾಯವನ್ನು ವಂಚಿಸುತ್ತಿದ್ದಾರೆ. ಅವರು ಖಾವಿಗೂ ಕಳಂಕ ತಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನ್ನ ತಾತ ಬ್ರಹ್ಮಶ್ರೀ ನಾರಾಯಣ ಗುರು ಪರಂಪರೆಯವರು. ನಾರಾಯಣ ಗುರುಗಳ ಜೊತೆಗೆ ಇದ್ದವರು. ನಾರಾಯಣ ಗುರುಗಳ ತತ್ತ್ವಗಳನ್ನು ಅನುಸರಿಸುತ್ತಿರುವೆನಾದರೂ, ನನ್ನದು ನಾಗ–ಸಾಧು ಪರಂಪರೆ. ಪ್ರಣವಾನಂದರು ನಾರಾಯಣ ಗುರುಗಳ ಪರಂಪರೆಯವರಲ್ಲ. ಅವರ ವಿರುದ್ಧ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ಸರ್ಕಾರ ಅವರ ಮೇಲೊಂದು ಕಣ್ಣಿಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.