ADVERTISEMENT

ಜೀವವೈವಿಧ್ಯ ದಾಖಲೆ: ಸಾಂಪ್ರದಾಯಿಕ ಜ್ಞಾನ ರಕ್ಷಣೆ

ದ.ಕ. ಜಿಲ್ಲೆಯ ಜೀವವೈವಿಧ್ಯ ದಾಖಲಾತಿಯ ಕರಡು ಸರ್ಕಾರಕ್ಕೆ ಸಲ್ಲಿಕೆ

ಸಂಧ್ಯಾ ಹೆಗಡೆ
Published 25 ಅಕ್ಟೋಬರ್ 2020, 6:15 IST
Last Updated 25 ಅಕ್ಟೋಬರ್ 2020, 6:15 IST
ಜೀವವೈವಿಧ್ಯ ದಾಖಲಾತಿ ವೇಳೆ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಹಿರಿಯರಿಂದ ಮಾಹಿತಿ ಸಂಗ್ರಹ
ಜೀವವೈವಿಧ್ಯ ದಾಖಲಾತಿ ವೇಳೆ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಹಿರಿಯರಿಂದ ಮಾಹಿತಿ ಸಂಗ್ರಹ   
""

ಮಂಗಳೂರು: ಗ್ರಾಮೀಣ ಜೀವವೈವಿಧ್ಯ, ಹಳ್ಳಿಗರ ನೆಲಮೂಲದ ಜ್ಞಾನವನ್ನು ದಾಖಲಿರುವ ಜನತಾ ಜೀವವೈವಿಧ್ಯ ದಾಖಲಾತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ದಾಖಲೀಕರಣದ ಪುಸ್ತಕ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಜೀವವೈವಿಧ್ಯ ಸಮಿತಿಗಳು, ಸಂಯೋಜಕರ ಸಹಕಾರದಲ್ಲಿ ದಾಖಲೆಗಳನ್ನು ಸಂಗ್ರಹಿಸಿ, ವರದಿ ಅಂತಿಮಗೊಳಿಸಲಾಗಿದೆ.

ಪ್ರತಿಯೊಂದು ಊರಿನ, ಗ್ರಾಮದ ಜೀವವೈವಿಧ್ಯವನ್ನು ದಾಖಲೆ ರೂಪದಲ್ಲಿ ಸಂಗ್ರಹಿಸಿರುವುದು ಜನತಾ ಜೀವವೈವಿಧ್ಯ ದಾಖಲಾತಿಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಗ್ರಾಮ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚನೆಗೊಂಡಿದೆ. ಪ್ರತಿ ತಾಲ್ಲೂಕಿಗೆ ಒಂದು ಹಾಗೂ ಇಡೀ ಜಿಲ್ಲೆಗೆ ಒಂದು ಸಮಿತಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದರ ಸದಸ್ಯ ಕಾರ್ಯದರ್ಶಿ.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯಲ್ಲಿ ಏಳು ಸದಸ್ಯರಿರುತ್ತಾರೆ. ಒಬ್ಬರು ತಜ್ಞ ಸಂಯೋಜಕರ ಸಹಕಾರ ಪಡೆದು, ಸಮಿತಿಯು ಜೀವವೈವಿಧ್ಯ ದಾಖಲಾತಿ ನಡೆಸಿದೆ. ಊರಿನಲ್ಲಿರುವ ಕೃಷಿ ಬೆಳೆಗಳು, ಔಷಧ ಸಸ್ಯಗಳು, ಹೂ–ಹಣ್ಣು, ಪ್ರಾಣಿ–ಪಕ್ಷಿ, ಹಳೆಯ ಮರಗಳು, ಐತಿಹಾಸಿಕ ಕಟ್ಟಡಗಳು, ನಾಟಿ ವೈದ್ಯರ ಮಾಹಿತಿ ಜತೆಗೆ, ಊರಿನ ಹಿರಿಯರ ಸಾಂಪ್ರದಾಯಿಕ ಜ್ಞಾನವೂ ಈ ವರದಿಯಲ್ಲಿ ದಾಖಲಾಗುತ್ತದೆ. ಆ ಮೂಲಕ ಜನಪದೀಯ ಜ್ಞಾನ ತಲೆಮಾರಿಗೆ ಮುಂದುವರಿಯಬೇಕು ಎಂಬುದು ದಾಖಲಾತಿಯ ಪ್ರಮುಖ ಆಶಯವಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯು ಇದರ ಉಸ್ತುವಾರಿ ನಿರ್ವಹಿಸುತ್ತಿದೆ.

ADVERTISEMENT
ಮಹಿಳೆಯೊಬ್ಬರಿಂದ ಮಾಹಿತಿ ಸಂಗ್ರಹಿಸಿದ ಸಂಯೋಜಕಿ ಶ್ವೇತಾ

ಈ ಬಾರಿ ಜುಲೈ ಮಧ್ಯಭಾಗದಲ್ಲಿ ದಾಖಲಾತಿ ನಡೆದಿದೆ. ಕೋವಿಡ್–19 ಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ದಾಖಲಾತಿ ಸಾಧ್ಯವಾಗಿಲ್ಲ. ಮನೆ–ಮನೆಗೆ ಭೇಟಿ, ಜ್ಞಾನ ಹಂಚಿಕೆಗೆ ಹಲವರು ಹಿಂದೇಟು ಹಾಕಿದರು ಎಂಬುದು ಬಹಳಷ್ಟು ಸಂಯೋಜಕರ ಅಭಿಪ್ರಾಯ.

‘ನೀರಿನ ಒರತೆಯನ್ನು ತಿಳಿಸುವ ರಾಂಪತ್ರ ಜಡ್ಡಿ(myristica swamp)ಗಳು ಸುಬ್ರಹ್ಮಣ್ಯ, ಪಂಜ ಭಾಗದ ಅನೇಕ ಕಡೆಗಳಲ್ಲಿವೆ. ಹಾಗೆಯೇ, ನಾಗಬನಗಳು, ಸ್ಥಳೀಯ ಬೆಳೆಗಳು, ಅವುಗಳ ವೈವಿಧ್ಯ, ಬಳಕೆ ಇಂತಹವುಗಳನ್ನು ದಾಖಲಿಸುವುದರಿಂದ, ಇದನ್ನು ಯುವ ತಲೆಮಾರಿಗೆ ತಿಳಿಸಲು ಸಾಧ್ಯವಾಗುತ್ತದೆ. ಮರೆಯಾಗುತ್ತಿರುವ ನೀರುನಾಯಿ ಸಂತತಿ ಬಗ್ಗೆ ಹಲವರು ಹೇಳಿದರು. ಆದರೆ, ಇವುಗಳನ್ನು ಇತ್ತೀಚಿನ ವರ್ಷಗಳಲ್ಲಿ ನೋಡಿಲ್ಲವೆಂದೂ ಉಲ್ಲೇಖಿಸಿದರು’ ಎನ್ನುತ್ತಾರೆ ಕಡಬ ಭಾಗದ ಸಂಯೋಜಕಿ ಶ್ವೇತಾ.

‘ದಾಖಲೀಕರಣಕ್ಕೆ ಸಮಯ ನೀಡಿದ್ದರೆ, ಹೆಚ್ಚು ವ್ಯಾಪಕವಾಗಿ ನಡೆಸಲು ಸಾಧ್ಯವಾಗುತ್ತಿತ್ತು. ಸಮಿತಿಯ ಪ್ರಮುಖರಿಗೆ ತರಬೇತಿ ನೀಡಿ, ದಾಖಲಾತಿಯ ಮಹತ್ವದ ಅರಿವು ಮೂಡಿಸಿದ್ದರೆ, ಇನ್ನಷ್ಟು ಹೆಚ್ಚು ಅರ್ಥಪೂರ್ಣವಾಗುತ್ತಿತ್ತು’ ಎಂದು ಸುಳ್ಯದ ಸಂಯೋಜಕರಾಗಿರುವ, ನಿವೃತ್ತ ಪ್ರಾಧ್ಯಾಪಕ ದೇವಿಪ್ರಸಾದ್ ಅಭಿಪ್ರಾಯಪಟ್ಟರು. ‘ಜೀವವೈವಿಧ್ಯ ದಾಖಲೀಕರಣದ ವೇಳೆ ಅನೇಕ ಅಚ್ಚರಿಯ ಸಂಗತಿಗಳು ಗಮನಕ್ಕೆ ಬಂದವು’ ಎಂದರು ಮಂಗಳೂರು ಭಾಗದ ಸಂಯೋಜಕಿ ಸುಮಂಗಲಾ.

ಬಾವಿ ಪಕ್ಕದಲ್ಲಿ ನಾಗಸಂಪಿಗೆ ಯಾಕೆ?:

ನಾಗಸಂಪಿಗೆ (ಗೋವೆಸಂಪಿಗೆ) ಮರಗಳನ್ನು ಬಾವಿಯ ಪಕ್ಕದಲ್ಲಿ ಬೆಳೆಸುತ್ತಾರೆ. ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿರುವ ಅದರ ಎಲೆಗಳು, ಬಾವಿಯಲ್ಲಿ ಬಿದ್ದು ಕೊಳೆತು, ಬಾವಿಯ ನೀರನ್ನು ಶುದ್ಧಗೊಳಿಸುತ್ತವೆ ಎಂದು ಅಜ್ಜಿಯೊಬ್ಬರು ಮಾಹಿತಿ ಕೊಟ್ಟರು. ಇಂತಹ ಅನೇಕ ಕೌತುಕಗಳು ಹಳೆಯ ಜನರಲ್ಲಿವೆ. ಆದರೆ, ಇದರಲ್ಲಿ ಕೆಲವಷ್ಟು ಸಂಗತಿಗಳು ತಲೆಮಾರಿಗೆ ಹಂಚಿಕೆಯಾಗದೇ ಕಳೆದುಹೋಗಿರುವ ಸಾಧ್ಯತೆಯಿದೆ ಎಂದು ಕಡಬ ಭಾಗದ ಸಂಯೋಜಕಿ ಶ್ವೇತಾ ತಿಳಿಸಿದರು.

ಜೀವವೈವಿಧ್ಯ ನಿರ್ವಹಣಾ ಸಮಿತಿ

ಸ್ಥಳೀಯ ಸಂಸ್ಥೆ;ಸಮಿತಿಗಳ ಸಂಖ್ಯೆ

ಜಿಲ್ಲಾ ಪಂಚಾಯಿತಿ;01

ತಾಲ್ಲೂಕು ಪಂಚಾಯಿತಿ;07

ಗ್ರಾಮ ಪಂಚಾಯಿತಿ;228

ನಗರ ಸಮಿತಿ;12

ಆಗಬೇಕಾಗಿದ್ದು ಏನು ?:

* ಜೀವವೈವಿಧ್ಯ ಪರಿಣಿತರನ್ನು ಅಧ್ಯಕ್ಷರನ್ನಾಗಿ ಮಾಡಿ, ಸಮಿತಿ ಸದೃಢಗೊಳಿಸಬೇಕು

* ಸಮಿತಿಯ ಸದಸ್ಯರಿಗೆ ಉಪಯುಕ್ತ ತರಬೇತಿ ನೀಡಬೇಕು

* ಸಂಪನ್ಮೂಲ ವ್ಯಕ್ತಿಗಳಲ್ಲಿ ಸಮಗ್ರ ಜ್ಞಾನ ಇರಬೇಕು

* ದಾಖಲಾತಿ ಪುಸ್ತಕ ಪ್ರತಿ ಪಂಚಾಯಿತಿಯಲ್ಲಿ ಇರಬೇಕು

* ಸಾಂಪ್ರದಾಯಿಕ ಆಚರಣೆ ಉಲ್ಲೇಖಕ್ಕೆ ಹೆಚ್ಚು ಒತ್ತು ನೀಡಬೇಕು

* ಸ್ಥಳ ಭೇಟಿ ನೀಡಿ, ಹಿರಿಯ ಸಾಂಪ್ರದಾಯಿಕ ಜ್ಞಾನವನ್ನು ವಿವರವಾಗಿ ದಾಖಲಿಸಬೇಕು

ಎದುರಾದ ತೊಡಕುಗಳು:

* ಗ್ರಾಮ ಮಟ್ಟದ ಸಮಿತಿಗಳಿಗೆ ತಜ್ಞರ ನೇತೃತ್ವದ ಕೊರತೆ

* ಸಮಿತಿ ಅಧ್ಯಕ್ಷರು, ಸದಸ್ಯರಿಗೆ ನಿರಾಸಕ್ತಿ

* ದಾಖಲಾತಿ ಪುಸ್ತಕದ ಸಾಂಪ್ರದಾಯಿಕ ಜ್ಞಾನ ಭರ್ತಿ ಮಾಡುವ ಕಾಲಂನಲ್ಲಿ ಸ್ಥಳಾವಕಾಶದ ಕೊರತೆ

* ಒಬ್ಬರೇ ಸಂಯೋಜಕರಿಗೆ 8–10 ಪಂಚಾಯಿತಿಗಳ ದಾಖಲಾತಿ ಹೊಣೆ

* ಕಾಲಾವಕಾಶ ಇಲ್ಲದೇ ತರಾತುರಿಯಲ್ಲಿ ನಡೆದ ದಾಖಲಾತಿ

* ಜನರಿಗೆ ಜೀವವೈವಿಧ್ಯ ದಾಖಲಾತಿಯ ಅರಿವಿಲ್ಲದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.