ADVERTISEMENT

ಸುಚರಿತ ಶೆಟ್ಟಿಗೆ ಬಿಜೆಪಿ ಬೆಂಬಲ ಇಲ್ಲ: ಉಮಾನಾಥ ಕೋಟ್ಯಾನ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 13:37 IST
Last Updated 23 ಏಪ್ರಿಲ್ 2025, 13:37 IST
ಉಮಾನಾಥ ಕೋಟ್ಯಾನ್
ಉಮಾನಾಥ ಕೋಟ್ಯಾನ್   

ಮೂಡುಬಿದಿರೆ: ‘ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಬಂಡಾಯವಾಗಿ ಸ್ಪರ್ಥಿಸುತ್ತಿರುವ ಜಿಲ್ಲಾ ಕೆಎಂಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಅವರಿಗೆ ಬಿಜೆಪಿಯಾಗಲಿ, ಸಹಕಾರ ಭಾರತಿಯಾಗಲಿ ಬೆಂಬಲ ನೀಡುವುದಿಲ್ಲ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಎಂಎಫ್ ನಿರ್ದೇಶಕರ ಚುನಾವಣೆಗೆ ಮಂಗಳೂರು ಉಪ ವಿಭಾಗದಿಂದ ಬಿಜೆಪಿ ಮತ್ತು ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಯಾಗಿ ಸುಧಾಕರ ರೈ, ಸುದೀಪ್ ಅಮೀನ್, ಸುಭದ್ರಾ ಎನ್.ರಾವ್ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಸವಿತಾ ಎನ್. ಶೆಟ್ಟಿ ಸ್ಪರ್ಥಿಸಲಿದ್ದಾರೆ. ಇವರ ಗೆಲುವಿಗೆ ನಾವು ಶ್ರಮಿಸಲಿದ್ದೇವೆ’ ಎಂದರು.

ಜೆಡಿಎಸ್‌ನಿಂದ ಬಿಜೆಪಿಗೆ ಬಂದಿದ್ದ ಸುಚರಿತ ಶೆಟ್ಟಿ, ಬಿಜೆಪಿ ಬೆಂಬಲದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಹಾಗೂ ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಪಕ್ಷ ಅವಕಾಶ ಕೊಟ್ಟಿದೆ. ಅವರ ಪತ್ನಿ ಸುನೀತಾ ಸುಚರಿತ ಶೆಟ್ಟಿಯನ್ನು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟಿದ್ದೇವೆ. ಸುಚರಿತ ಶೆಟ್ಟಿ ಮೂರು ಬಾರಿ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷವು ಅವರಿಗೆ ಎಲ್ಲಾ ರೀತಿಯ ಅವಕಾಶ, ಸ್ಥಾನಮಾನಗಳನ್ನು ಕೊಟ್ಟಿದೆ. ಈ ಬಾರಿ ಕೆಎಂಎಫ್ ಚುನಾವಣೆಯಲ್ಲಿ ಪಕ್ಷ ಹೊಸಬರಿಗೆ ಅವಕಾಶ ಕೊಟ್ಟಿದೆ. ಈ ಮಧ್ಯೆ ಸುಚರಿತ ಶೆಟ್ಟಿ ಅವರಿವರ ಮಾತು ಕೇಳಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ತಪ್ಪು. ಪಕ್ಷದ ಶಿಸ್ತನ್ನು ಅವರು ಉಲ್ಲಂಘಿಸಿದ್ದಾರೆ. ಸದ್ಯ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೂ, ಮುಂದೆ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಬಹುದು’ ಎಂದರು. 

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಪೈ, ಪಕ್ಷದ ಪ್ರಮುಖರಾದ ಈಶ್ವರ್ ಕಟೀಲು, ಶಾಂತಿ ಪ್ರಸದ್ ಹೆಗ್ಡೆ, ಹರಿಪ್ರಸಾದ್ ಶೆಟ್ಟಿ, ರಂಜಿತ್ ಪೂಜಾರಿ, ಜಗನ್ನಾಥ್  ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.