ADVERTISEMENT

 ಬೊಕ್ಕಸ ಖಾಲಿ ಮಾಡಿ ಕುಳಿತ ರಾಜ್ಯ ಸರ್ಕಾರ

ಜನರ ಗಮನ ಬೇರೆಡೆ ಸೆಳೆಯಲು ಗೊಂದಲ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:14 IST
Last Updated 29 ಅಕ್ಟೋಬರ್ 2025, 4:14 IST
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗೆ ಪುತ್ತೂರಿನ ಜೈನ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಎಲ್ಎ-2 ಕಾರ್ಯಾಗಾರವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಉದ್ಘಾಟಿಸಿದರು
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗೆ ಪುತ್ತೂರಿನ ಜೈನ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಎಲ್ಎ-2 ಕಾರ್ಯಾಗಾರವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಉದ್ಘಾಟಿಸಿದರು   

ಪುತ್ತೂರು: ಪಂಚ ಗ್ಯಾರಂಟಿ ಆಮಿಷದ ಮೂಲಕ ಜನರ ದಾರಿತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈಗ ಇದೇ ಪಂಚ ಗ್ಯಾರಂಟಿ ಯೋಜನೆಯಿಂದ ಬೊಕ್ಕಸ ಖಾಲಿ ಮಾಡಿ ಕೂತಿದೆ. ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಇಲ್ಲಸಲ್ಲದ ವಿಚಾರ ಎತ್ತಿಕೊಂಡು ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಪುತ್ತೂರಿನ ಜೈನ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಎಲ್ಎ-2 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆಮಿಷಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮತ ಮಾರಾಟ ಮಾಡಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಮತದಾರರು ಮತ್ತೆ ಜಾಗೃತರಾಗುವ ಅನಿವಾರ್ಯತೆ ಇದೆ ಎಂದರು.

ADVERTISEMENT

ಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಈಶಾನ್ಯ ಭಾರತದಲ್ಲಿ ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಶೇ 40ರಷ್ಟು ಮತದಾರರು ನುಸುಳುಕೋರರೇ ಆಗಿದ್ದಾರೆ. ಇದನ್ನೆಲ್ಲ ತಡೆದು ದೇಶದ ನೈಜ ಪ್ರಜೆಗಳನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಎಸ್ಐಆರ್ (ಸ್ಪೆಷಲ್ ಇಂಟೆನ್ಸಿವ್ ರಿವಿಷನ್) ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಇದರ ಯಶಸ್ಸಿನಲ್ಲಿ ನಮ್ಮ ಪಕ್ಷದ ಬಿಎಲ್ಎಗಳು ಸಕ್ರಿಯವಾಗಿ ತೊಡಗಿಸಿಕೊಂಡು ಆಯೋಗದ ಕಾರ್ಯಕ್ಕೆ ನೆರವು ನೀಡಬೇಕು ಎಂದು ಕಿಶೋರ್ ಕುಮಾರ್ ಸಲಹೆ ನೀಡಿದರು.

ಬಿಜಪಿ ಮುಖಂಡ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪುತ್ತೂರು ಮಂಡಲದ ಪ್ರಭಾರಿ ಸುನಿಲ್ ಆಳ್ವ, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಪಿ.ಬಿ.ಕಲ್ಲಿಮಾರ್, ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಬಿಜತ್ರೆ ಭಾಗವಹಿಸಿದ್ದರು.

ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿದರು. ಮುಖಂಡರಾದ ಹರಿಪ್ರಸಾದ್ ಯಾದವ್ ಮತ್ತು ಯುವರಾಜ್ ಪೆರಿಯತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತರಬೇತಿ ಕಾರ್ಯಾಗಾರ ನಡೆಯಿತು.