ADVERTISEMENT

ಇಂತಹ ದರಿದ್ರ ಸರ್ಕಾರ ಬೇರೊಂದಿಲ್ಲ: ಶಾಸಕ ಕಾಮತ್‌

ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 16:07 IST
Last Updated 23 ಜೂನ್ 2025, 16:07 IST
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು   

ಮಂಗಳೂರು: ‘ಎರಡೂವರೆ ವರ್ಷದಲ್ಲಿ ಸರ್ಕಾರ ಒಂದೇ ಒಂದು ಆಶ್ರಯ ಮನೆ ನೀಡಿಲ್ಲ, ಒಂದೇ ಒಂದು ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಇಂತಹ ದರಿದ್ರ ಸರ್ಕಾರ ಬೇರೊಂದಿಲ್ಲ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಟೀಕಿಸಿದರು.

ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಪಾಲಿಕೆ ಕೇಂದ್ರ ಕಚೇರಿ ಎದುರು ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ಜನನ ಪ್ರಮಾಣಪತ್ರ ಹಾಗೂ ಮರಣ ಪತ್ರಕ್ಕೆ ₹ 5 ಶುಲ್ಕವಿತ್ತು. ಅದನ್ನು ₹ 70ಕ್ಕೆ ಏರಿಸಲಾಗಿದೆ. ಈ ಸರ್ಕಾರ ಸಾಯುವವರನ್ನೂ ಬಿಟ್ಟಿಲ್ಲ, ಮೆಸ್ಕಾಂ ಸಿಬ್ಬಂದಿಯ  ಗ್ರಾಚ್ಯುಯಿಟಿ, ಪಿಂಚಣಿ ಸಲುವಾಗಿ ವಿದ್ಯುತ್ ಶುಲ್ಕದ ಶೇ 10ರಷ್ಟು ಮೊತ್ತ ಪಡೆಯಲಾಗುತ್ತಿದೆ. ಈ ರೀತಿ  ಹಣ ವಸೂಲಿ  ಮಾಡುವುದಕ್ಕಿಂತ ಎಂ.ಜಿ.ರಸ್ತೆಯಲ್ಲಿ ಭಿಕ್ಷೆ ಬೇಡಬಹುದಲ್ಲವೇ’ ಎಂದರು.

ADVERTISEMENT

‘ಅಲ್ಪಸಂಖ್ಯಾತರ ತುಷ್ಟೀಕರಣ ಮಿತಿ ಮೀರಿದೆ. ರಸ್ತೆಯಲ್ಲೇ ನಮಾಜ್‌ ಮಾಡುವ ಮುಸ್ಲೀಮರು, ಇದು ಅಜ್ಜ ಟಿಪ್ಪು ನಿರ್ಮಿಸಿದ ರಸ್ತೆ ಎನ್ನುತ್ತಾರೆ’ ಎಂದರು.

‘ಈಗ ಕಮಿಷನರ್ ನೇಮಕಕ್ಕೆ ₹2ಕೋಟಿ ಕೊಡಬೇಕು. ನಮ್ಮ ಅವಧಿಯಲ್ಲಿ ಒಂದು ರೂಪಾಯಿಯನ್ನೂ ಪಡೆಯದೆಯೇ ಕಮಿಷನರ್ ಅವರನ್ನು ನೇಮಿಸಲಾಗಿತ್ತು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ‘ಪ್ರಕೃತಿ ವಿಕೋಪದಿಂದ  ಬಿದ್ದ ಮನೆಗೆ ಬಿಜೆಪಿ ಸರ್ಕಾರ ಗರಿಷ್ಠ ₹ 5 ಲಕ್ಷ ಪರಿಹಾರ ನೀಡಿತ್ತು. ಈಗ ₹ 1.20 ಲಕ್ಷಕ್ಕಿಂತ ಹೆಚ್ಚು ಪರಿಹಾರ ಸಿಗದು. ಮನೆ ಕಟ್ಟಲು ಮರಳು, ಕೆಂಪುಕಲ್ಲು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಮರಳಿನ ದರ ಲೋಡ್‌ಗೆ ₹ 30 ಸಾವಿರಕ್ಕೆ, ಕೆಂಪುಕಲ್ಲಿನ ದರ ₹ 50ಕ್ಕೆ ಹೆಚ್ಚಳವಾಗಿದೆ’ ಎಂದರು.  
ಬಿಜೆಪಿ ಜಿಲ್ಲಾ ಘಟಕದ  ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಖಜಾಂಚಿ ಸಂಜಯ ಪ್ರಭು, ಮುಖಂಡರಾದ ವಿಕಾಸ್ ಪುತ್ತೂರು, ನಿತಿನ್ ಕುಮಾರ್‌, ಶುಭಕರ ಜೋಶಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು ಮೊದಲಾದವರು ಭಾಗವಹಿಸಿದರು.

‘ಬಿಜೆಪಿ ಅವಧಿಯಲ್ಲಿ ಪ್ರವಾಹ ಬಂದಿದ್ದು ತೋರಿಸಿ’

‘ಈ ವರ್ಷ ಫೆ. 28ರ ನಂತರ ಪಾಲಿಕೆಯಲ್ಲೂ ಕಾಂಗ್ರೆಸ್ ಆಡಳಿತವಿದೆ. ಈ ಸಲ ಮೇ ತಿಂಗಳಲ್ಲೂ ಹೂಳೆತ್ತಿಲ್ಲ. ಹಾಗಾಗಿ ಪ್ರವಾಹ ಬಂದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾರ್ಚ್ ತಿಂಗಳಲ್ಲಿ ಹೂಳೆತ್ತಲಾಗುತ್ತಿತ್ತು. ನಮ್ಮ ಅವಧಿಯಲ್ಲಿ ಮಂಗಳೂರಿನಲ್ಲಿ ನೆರೆ ಬಂದಿದ್ದು ತೋರಿಸಲಿ’ ಎಂದು ವೇದವ್ಯಾಸ ಕಾಮತ್‌ ಸವಾಲು ಹಾಕಿದರು. ‘ನಗರದಲ್ಲಿ 178 ಕಿ.ಮೀ ಉದ್ದದ ಮಳೆ ನೀರು ಹರಿಯುವ ಕಾಲುವೆ ಜಾಲವಿದ್ದು ಅದಕ್ಕೆ ಸಂಪೂರ್ಣ ತಡೆಗೋಡೆ ಕಟ್ಟಲು ₹ 1000 ಕೋಟಿ ಬೇಕು. ನಮ್ಮ ಸರ್ಕಾರವಿದ್ದಾಗ ಇದಕ್ಕಾಗಿ ಸಾಕಷ್ಟು ಅನುದಾನ ನೀಡಿದ್ದೆವು’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.