ADVERTISEMENT

ಬಿಜೆಪಿಗೆ ರಾಹುಲ್‌ ಗಾಂಧಿಯ ಭಯ: ಯು.ಟಿ.ಖಾದರ್‌

ಕಾಂಗ್ರೆಸ್‌ ನಾಯಕನ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಯತ್ನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 11:11 IST
Last Updated 15 ಜೂನ್ 2022, 11:11 IST
ಯು.ಟಿ.ಖಾದರ್‌
ಯು.ಟಿ.ಖಾದರ್‌    

ಮಂಗಳೂರು: 'ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಕಠಿಣ ಶ್ರಮ, ವಿಚಾರ ಬದ್ಧತೆ, ಸಂವಿಧಾನ ಪ್ರೀತಿ, ದೂರದರ್ಶಿತ್ವ ಹಾಗೂ ಸಂವಹನ ಕೌಶಲಗಳನ್ನು ಕಂಡು ಬಿಜೆಪಿ ಭಯ ಬಿದ್ದಿದೆ. ಹಾಗಾಗಿ ಜಾರಿ ನಿರ್ದೇಶನಾಲಯದಿಂದ ನೋಟಿಸ್‌ ಕಳುಹಿಸಿ ವಿಚಾರಣೆಗೆ ಒಳಪಡಿಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆಸಿದೆ’ ಎಂದುವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಇಲ್ಲಿ ಮಾತನಾಡಿದ ಅವರು, ‘ರಾಹುಲ್‌ ಗಾಂಧಿ ಬಗ್ಗೆ ಬಿಜೆಪಿ ಎಷ್ಟೇ ಅಪಪ್ರಚಾರ ಮಾಡಿದರೂ ರಾಹುಲ್‌ ಗಾಂಧಿ ಅವರು ಸಂವಿಧಾನಕ್ಕೆ ತೋರುವ ಬದ್ಧತೆಯಿಂದ ಸ್ವಲ್ಪವೂ ವಿಚಲಿತರಾಗಿಲ್ಲ. ಅದಕ್ಕಾಗಿಯೇಸುಳ್ಳು ಆರೋಪ ಹೊರಿಸಿ, 2016ರಲ್ಲೇ ಮುಗಿದು ಹೋದ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ. ಬಿಜೆಪಿಯ ರಾಜಕೀಯ ಪ್ರೇರಿತ ಷಡ್ಯಂತ್ರ ಜಾಸ್ತಿ ದಿನ ನಡೆಯುವುದಿಲ್ಲ. ಜನರು ಒಂದಲ್ಲ ಒಂದು ದಿನ ಸತ್ಯವನ್ನು ಅರಿತು, ಅವರ ದೂರದರ್ಶಿತ್ವವನ್ನು ನಾಯಕತ್ವ ಗುಣವನ್ನು ಒಪ್ಪಿಕೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಾಕ್‌ ಗಡಿಯಿಂದ ನಮ್ಮ ದೇಶದೊಳಗೆ 250 ಕಿ.ಮೀ ದೂರದವರೆಗೆ 200 ಕೆ.ಜಿ. ಆರ್‌ಡಿಎಕ್ಸ್‌ ಸಾಗಿಸಿದರೂ ಸರ್ಕಾರಕ್ಕೆ ಗುಪ್ತಚರ ಮಾಹಿತಿಯೇ ಇರುವುದಿಲ್ಲ. ಚೀನಾದವರು ನಮ್ಮ ನೆಲವನ್ನು ಆಕ್ರಮಣ ಮಾಡಿದರೂ ತಿಳಿಯುವುದಿಲ್ಲ. ಇವೆಲ್ಲದರ ಬಗ್ಗೆ ದನಿ ಎತ್ತಿದ್ದರಿಂದಲೇ ರಾಹುಲ್‌ ಅವರನ್ನು ಗುರಿಯಾಗಿಸಿ ನೋಟಿಸ್‌ ಜಾರಿ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ರಾಜಕೀಯ ಮುಖಂಡರನ್ನು ಗುರಿಯಾಗಿಸುವುದು ಬಿಜೆಪಿಗೆ ಶೋಭೆ ತರುವುದಿಲ್ಲ’ ಎಂದರು.

ADVERTISEMENT

‘ಬೋಫೋರ್ಸ್‌ ಹಗರಣ ಸೃಷ್ಟಿಸಿ ರಾಜೀವ್‌ ಗಾಂಧಿ ವಿಚಾರದಲ್ಲೂ ಇದೇ ರೀತಿ ಮಾಡಲಾಯಿತು. ಅಂತಹ ಹಗರಣವೇ ನಡೆದಿಲ್ಲ ಎಂಬುದು ತನಿಖೆಯಿಂದ ಸಾಬೀತಾಯಿತು. ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಲು ಕೊನೆಗೆ ಇದೇ ಬೋಪೋರ್ಸ್‌ ಬಂದೂಕುಗಳನ್ನೇ ಬಳಸಬೇಕಾಯಿತು. ಬಿಜೆಪಿ ಷಡ್ಯಂತ್ರಗಳನ್ನು ಕಾಂಗ್ರೆಸ್‌ ಸಮರ್ಥವಾಗಿ ಎದುರಿಸಲಿದೆ’ ಎಂದರು.

‘ಧರ್ಮ ನಿಂದನೆ ಹೇಳಿಕೆ ನೀಡಿದ, ದ್ವೇಷ ಪೂರಿತ ಮಾತುಗಳನ್ನು ಆಡಿದ ತಕ್ಷಣವೇನೂಪುರ್‌ ಶರ್ಮ ಅವರನ್ನು ಸರ್ಕಾರ ತಕ್ಷಣವೇ ಬಂಧಿಸುತ್ತಿದ್ದರೆ ಸಮಸ್ಯೆಯೇ ಆಗುತ್ತಿರಲಿಲ್ಲ. ಯಾವುದೋ ವ್ಯಕ್ತಿ ನೀಡಿದ ಹೇಳಿಕೆಗೆ ಭಾರತ ಸರ್ಕಾರ ವಿದೇಶಿಗರ ಮುಂದೆ ಕ್ಷಮೆ ಕೇಳುವ ಮೂಲಕ ಅಂತರರಾಷ್ಟ್ರೀಯ ಸಮುದಾಯದ ಮುಂದೆ ತಲೆ ತಗ್ಗಿಸುವ ಅಗತ್ಯ ಇರಲಿಲ್ಲ. ಈಗಲೂ ಆಕೆಯ ಹೇಳಿಕೆಯ ವಿಚಾರವನ್ನೇ ಮುಂದಿಟ್ಟುಕೊಂಡು ಕೆಲವರು ಗಲಾಟೆ ನಡೆಸುವುದನ್ನು ಸಮರ್ಥಿಸಲಾಗದು. ನಮ್ಮ ಜಿಲ್ಲೆಯಲ್ಲಂತೂ ಯಾವುದೇ ಮುಸ್ಲಿಂ ನಾಯಕರು ಈ ಕುರಿತು ಪ್ರತಿಭಟನೆಗೆ ಕರೆ ನೀಡಿಲ್ಲ. ಯಾರಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂಥಹ ಮಾಹಿತಿ ಹಂಚಿಕೊಂಡು ಶಾಂತಿ ಕದಡುವ ಯತ್ನ ನಡೆಸಿದರೆ, ಪೊಲೀಸರು ಅಂತಹವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪಠ್ಯಪುಸ್ತಕ: ಸಾಹಿತಿಗಳ ಸಲಹೆ ಸ್ವೀಕರಿಸಿ’

‘ಪಠ್ಯಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಬಸವಣ್ಣ, ನಾರಾಯಣ ಗುರುಗಳ ಪಠ್ಯ ಕೈಬಿಟ್ಟಿದ್ದಾರೆ. ಕುವೆಂಪು, ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಲಾಗಿದೆ. ಸಂವಿಧಾನಕ್ಕೆ ಗೌರವವೇ ಇಲ್ಲದಂತೆ ಮಾಡಲಾಗಿದೆ. ಇಂಥಹ ಪಠ್ಯವನ್ನು ಮಕ್ಕಳು ಏಕೆ ಕಲಿಯಬೇಕು’ ಎಂದು ಖಾದರ್‌ ಪ್ರಶ್ನಿಸಿದರು.

ಈಗಲಾದರೂ ಎಚ್ಚೆತ್ತು ಸಾಹಿತಿಗಳು ಹಾಗೂ ಚಿಂತಕರ ಸಲಹೆಗಳನ್ನು ಸ್ವೀಕರಿಸಿ ಪಠ್ಯಪುಸ್ತಕಗಳನ್ನು ಸರ್ಕಾರ ಮರುಪರಿಷ್ಕರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

‘ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಹಿಂದುಳಿದವ ವರ್ಗ, ದಲಿತರು, ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯವೇ ಇಲ್ಲ. ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಯನ್ನು ಪರೋಕ್ಷವಾಗಿ ಹೇರುವ ಪ್ರಯತ್ನ ಮಾಡುತ್ತಿದೆ‘ ಎಂದರು.

ರಾಹುಲ್‌ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್‌ ಜಾರಿಗೊಳಿಸುವ ಮೂಲಕ ಬಿಜೆಪಿಯು ಅವರೊಬ್ಬ ವ್ಯಕ್ತಿ ಅಲ್ಲ, ಶಕ್ತಿ ಎಂದು ಒಪ್ಪಿಕೊಂಡಿದೆ.
- ಯು.ಟಿ.ಖಾದರ್‌, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.