ADVERTISEMENT

ಲವ್ ಜಿಹಾದ್; ಮಾತೆಯರು ಎಚ್ಚರವಹಿಸಿ- ತೇಜಸ್ವಿನಿ ಗೌಡ

ಬಿಜೆಪಿ ಮಹಿಳಾ ಸಮಾವೇಶದಲ್ಲಿ ತೇಜಸ್ವಿನಿ ರಮೇಶ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 15:49 IST
Last Updated 25 ಫೆಬ್ರುವರಿ 2023, 15:49 IST
ಮಂಗಳೂರಿನ ಟಿ ವಿ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು
ಮಂಗಳೂರಿನ ಟಿ ವಿ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು   

ಮಂಗಳೂರು: ದಕ್ಷಿಣ ಕನ್ನಡವು ಕೇರಳದ ಗಡಿಯಲ್ಲಿದೆ. ಆಂಧ್ರಪ್ರದೇಶದಿಂದ ಇಲ್ಲಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ, ಕೇರಳದಿಂದ ಐಎಸ್‌ಐಎಸ್ ಸಂಪರ್ಕ ಸಾಧಿಸಲಾಗುತ್ತದೆ ಎಂಬ ಆರೋಪವಿದೆ. ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ, ಭಯೋತ್ಪಾದನಾ ಕೃತ್ಯಗಳಿಗೆ ಉಪಯೋಗಿಸುತ್ತಾರೆ. ಈ ಬಗ್ಗೆ ಮಾತೆಯರು ಎಚ್ಚರಿಕೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಶನಿವಾರ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು. ರಾಷ್ಟ್ರದ್ರೋಹ, ಅತ್ಯಾಚಾರದಂತಹ ಕೃತ್ಯಗಳಿಗೆ ಬಾಯಲ್ಲಿ ಉತ್ತರ ಹೇಳುವ ಕಾಲ ಹೋಗಿದೆ. ಈಗ ಗುಂಡಿನಲ್ಲಿ
ಉತ್ತರ ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಮಾತೆಯರಿಗೆ ಮೊದಲ ಸ್ಥಾನ ನೀಡಲಾಗುತ್ತಿದೆ. ಮನೆ ಮಗಳು ಸುರಕ್ಷಿತವಾಗಿ ಇರಲು ಧರ್ಮಕ್ಕೆ ಜಯ ಸಿಗಬೇಕು. ರಾಷ್ಟ್ರವೇ ಮೊದಲು ಎಂದು ದಿನದ 18 ಗಂಟೆ ದೇಶಕ್ಕಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.

ವೇದವ್ಯಾಸ ಕಾಮತ್ ಅವರು ಸ್ಮಾರ್ಟ್ ಸಿಟಿ ಯೋಜನೆ, ಜಲಜೀವನ ಮಿಷನ್ ಯೋಜನೆಯನ್ನು ಯಶಸ್ವಿಯಾಗಿ
ಅನುಷ್ಠಾನಗೊಳಿಸುತ್ತಿದ್ದಾರೆ. ಕ್ಷೇತ್ರದ 165 ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ₹28 ಕೋಟಿ ನೀಡಿದ್ದಾರೆ. ಪಾರ್ಕ್‌ಗಳ ಅಭಿವೃದ್ಧಿ, ವೃತ್ತಗಳ ಅಭಿವೃದ್ಧಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ರಾಹುಲ್ ಗಾಂಧಿ ಕಾಶ್ಮೀರಕ್ಕೆ ತೆರಳಿ ಮಂಜುಗಡ್ಡೆಯ ಮೇಲೆ ಆಟವಾಡುವಷ್ಟರ ಮಟ್ಟಿಗೆ ಕಾಶ್ಮೀರದಲ್ಲಿ ಭಯೋತ್ಪಾದನೆ ಇಳಿಮುಖವಾಗಿದೆ ಎಂದರು.

ADVERTISEMENT

ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಪೂರ್ಣಿಮಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಬಿಜೆಪಿ ದಕ್ಷಿಣ ಮಂಡಲ ಪ್ರಭಾರಿ ಸಂತೋಷ್ ಕುಮಾರ್ ರೈ ಬೋಳಿಯಾರ್, ಚುನಾವಣಾ ಪ್ರಭಾರಿ ಸುಪ್ರಸಾದ್ ಶೆಟ್ಟಿ ಬೈಕಾಡಿ ಇದ್ದರು. ಮಹಿಳಾ ಮೋರ್ಚಾ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷೆ ಪೂರ್ಣಿಮಾರಾವ್ ಸ್ವಾಗತಿಸಿದರು. ರೂಪಾ ಡಿ.ಬಂಗೇರ,
ಲೀಲಾವತಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಮಹಿಳೆಯರನ್ನು
ಸನ್ಮಾನಿಸಲಾಯಿತು. ಸಭೆಗೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

‘₹ 4ಸಾವಿರ ಕೋಟಿ ಅನುದಾನ’

ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು ₹ 4ಸಾವಿರ ಕೋಟಿ ಅನುದಾನ ತರಲಾಗಿದೆ. ಇವುಗಳಲ್ಲಿ ₹ 1,800 ಕೋಟಿ ವೆಚ್ಚ ಕಾಮಗಾರಿಗಳು ನಡೆಯುತ್ತಿವೆ. ಇನ್ನುಳಿದ ಕಾಮಗಾರಿ ಇನ್ನಷ್ಟೇ ಆಗಬೇಕಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಎಂಟು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಬಗ್ಗೆ ಮೃದು ಧೋರಣೆ ತಳೆದ ಕಾಂಗ್ರೆಸ್ ಆತನನ್ನು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಾರಿಕ್‌ನಂತಹವರು ಒಂದರ ಬದಲಿಗೆ 16 ಬಾಂಬ್ ಹಿಡಿದು ಬರಬಹುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.