ADVERTISEMENT

ಬಿಜೆಪಿ ದೇಶದ ಜನರ ವಿಶ್ವಾಸ ಗೆದ್ದಿದೆ

ಜಿಲ್ಲಾ ಕಾರ್ಯಕಾರಿಣಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:19 IST
Last Updated 11 ಸೆಪ್ಟೆಂಬರ್ 2019, 12:19 IST
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಮಾತನಾಡಿದರು.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಮಾತನಾಡಿದರು.   

ಮಂಗಳೂರು: ಉತ್ತಮ ಆಡಳಿತ ನೀಡುವ ಮೂಲಕ ಬಿಜೆಪಿ ದೇಶದ ಜನರ ವಿಶ್ವಾಸವನ್ನು ಗೆದ್ದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಎಂದ ಅವರು, ಬಿಜೆಪಿ ದೇಶದಲ್ಲಿ ಒಳ್ಳೆಯ ಆಡಳಿತವನ್ನು ನೀಡಿದೆ. ಇದರಿಂದಾಗಿಯೇ ಜನರ ವಿಶ್ವಾಸವನ್ನೂ ಗೆದ್ದಿದೆ ಎಂದರು.

ADVERTISEMENT

ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇದರಿಂದಾಗಿ ಪಕ್ಷವು ಪ್ರವರ್ಧಮಾನಕ್ಕೆ ಬರುತ್ತಿದೆ. 2000 ದಲ್ಲಿ ಎಲ್‌.ಕೆ. ಅಡ್ವಾಣಿ ಅವರು ರಥಯಾತ್ರೆಯ ಮೂಲಕ ದೇಶದಾದ್ಯಂತ ಸಂಚರಿಸಿ ಪಕ್ಷದ ಸಂಘಟನೆ ಮಾಡಿದ್ದರು. ಅಂದಿನಿಂದಲೇ ದೇಶದ ಜನರು ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದು, ಇದೀಗ ಸಂಪೂರ್ಣ ಬಹುಮತದೊಂದಿಗೆ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ 18 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದಂತೆ ಬೀದರ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಸದಸ್ಯತ್ವ ನೋಂದಣಿಯಾಗಿದೆ ಎಂದರು.

ಬರ ಮತ್ತು ನೆರೆಯಂತಹ ಕಠಿಣ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೂ ಅವರು ಪ್ರವಾಹ ಸ್ಥಿತಿಯನ್ನು ನಿಭಾಯಿಸಿದ ರೀತಿ ಮಾದರಿಯಾಗಿದೆ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳ್ತಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ₹10 ಲಕ್ಷ, ಪ್ರತಿ ತಿಂಗಳು ₹10 ಸಾವಿರ ಪರಿಹಾರ, ಮನೆ ಬಾಡಿಗೆಯಾಗಿ ₹5 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಅದರಂತೆ ರಾಜ್ಯದಾದ್ಯಂತ ಸಂತ್ರಸ್ತರಿಗೆ ಪರಿಹಾರಧನವನ್ನು ವಿತರಿಸಲಾಗಿದೆ ಎಂದು ಹೇಳಿದರು.

ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಪಾರದರ್ಶಕತೆ ಇದೆ. ಆದರೆ, ಕೇಂದ್ರ ಸರ್ಕಾರದಿಂದ ಪರಿಹಾರ ಧನ ತರಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ಅವರಿಗೆ ಟೀಕಿಸುವುದನ್ನು ಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ. ಹಾಗಾಗಿ ಸರ್ಕಾರದ ಪ್ರತಿನಿಧಿಗಳಾಗಿ ವಿರೋಧಿಗಳ ಟೀಕೆಗಳನ್ನೂ ಸ್ವೀಕರಿಸುತ್ತೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಪಾರ ಪ್ರಮಾಣದ ಪರಿಹಾರವನ್ನು ನೀಡಿದೆ. ವಾಸ್ತವಿಕತೆಯನ್ನು ಗಮನದಲ್ಲಿ ಇಟ್ಟುಕೊಂಡು ಟೀಕೆಗಳನ್ನು ಮಾಡಿದರೆ ಒಳಿತು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಸ್ವಾಗತಿಸಿದರು. ಮಂಗಳೂರು ವಿಭಾಗದ ಪ್ರಭಾರಿ ಉದಯಕುಮಾರ್, ಸಹ ಪ್ರಭಾರಿ ಪ್ರತಾಪ್‌ಸಿಂಹ ನಾಯಕ್‌, ಜಿಲ್ಲೆಯ ಶಾಸಕರು, ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕಾರಿಣಿ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.