ADVERTISEMENT

ಬಿ.ಎಲ್.ಸಂತೋಷ್ ಅವಹೇಳನ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:43 IST
Last Updated 21 ಆಗಸ್ಟ್ 2025, 5:43 IST
   

ಮಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಪ್ರಕರಣ ಸಂಬಂಧ ಉಡುಪಿ ಜಿಲ್ಲೆಯ ಪೊಲೀಸರು ರಾಷ್ಟೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಜಿರೆಯ ತಿಮರೋಡಿಯಲ್ಲಿರುವ ಅವರ ಮನೆಯಲ್ಲಿ ಗುರುವಾರ ವಶಕ್ಕೆ ಪಡೆದರು.

ಈ ವೇಳೆ ಭಾರಿ ಸಂಖ್ಯೆಯಲ್ಲಿ ಹಾಜರಿದ್ದ ಮಹೇಶ್ ಶೆಟ್ಟಿ ಅವರ ಬೆಂಬಲಿಗರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮಹೇಶ್ ಶೆಟ್ಟಿ, ‘ಎಸ್ಐಟಿ ತನಿಖೆ ಮುಚ್ಚಿಸಲು ಮಾಡಿರುವ ಷಡ್ಯಂತ್ರವಿದು. ಇದು ಬಿಜೆಪಿಯವರ ಪಾಪದ ಕೂಸು. ಅವರು ಸರ್ವ ನಾಶ ಆಗಿ ಹೋಗುತ್ತಾರೆ. ನಾನು ಪೊಲೀಸರಿಗೆ ಹೇಳಿಕೆ ನೀಡುತ್ತೇನೆ. ಸೌಜನ್ಯಾಗೆ ನ್ಯಾಯ ಸಿಗಬೇಕು. ನ್ಯಾಯ ಖಂಡಿತಾ ಸಿಗುತ್ತದೆ’ ಎಂದು ಹೇಳಿದರು.

ADVERTISEMENT

‘ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ಸರ್ಕಾರ ಮತ್ತು ಬಿಜೆಪಿ ಕಾರಣ' ಎಂದರು.

ಬಳಿಕ ಖಾಸಗಿ ಕಾರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟೆಣ್ಣನವರ ಪೊಲೀಸರ ಜೊತೆ ತೆರಳಿದರು.

'ಬಿ. ಎಲ್.ಸಂತೋಷ್‌ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಹಿಂದೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ, ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸು ಹಾಗೂ ದ್ವೇ಼ಷ ಭಾವನೆಯನ್ನು ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ಬ್ರಹ್ಮಾವರ ಪೊಲೀಸ್‌ ಠಾಣೆಗೆ ಬಿಜೆಪಿಯ ಉಡುಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ ಕುಲಾಲ್ ಈಚೆಗೆ ದೂರು ನೀಡಿದ್ದರು.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196(1), 352 ಹಾಗೂ 353(2)ರ ಅಡಿ ಆ. 16ರಂದು ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮಹೇಶ್ ಶೆಟ್ಟಿ ಅವರಿಗೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.