ADVERTISEMENT

ಅಂಗಾರ, ಹಾಲಾಡಿಗೆ ಸಚಿವ ಸ್ಥಾನ

ಕೋಟ ಶ್ರೀನಿವಾಸ ಪೂಜಾರಿ ಸಭಾಪತಿ ಸ್ಥಾನ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 17:31 IST
Last Updated 25 ನವೆಂಬರ್ 2020, 17:31 IST
ಮಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಪಕ್ಷದ ಮುಖಂಡರ ಜೊತೆ ಚರ್ಚಿಸಿದರು. 
ಮಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಪಕ್ಷದ ಮುಖಂಡರ ಜೊತೆ ಚರ್ಚಿಸಿದರು.    

ಮಂಗಳೂರು: ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚೆಗಳು ಆರಂಭವಾಗುತ್ತಿರುವ ಮಧ್ಯೆ ಕರಾವಳಿಯಲ್ಲಿ ಮತ್ತೆ ಸಚಿವ ಸ್ಥಾನದ ಲೆಕ್ಕಾಚಾರಗಳು ಗರಿಗೆದರಿವೆ. ಕರಾವಳಿಯಿಂದ ಸದ್ಯಕ್ಕಿರುವ ಸಚಿವರನ್ನು ಕೈಬಿಟ್ಟು, ಮತ್ತೊಬ್ಬರಿಗೆ ಅವಕಾಶ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ಮುಜರಾಯಿ, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಬದಲಿಗೆ ಸುಳ್ಯ ಕ್ಷೇತ್ರದ ಎಸ್‌.ಅಂಗಾರ ಅಥವಾ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ವಿಧಾನಸಭೆಯಲ್ಲಿ ಹಿರಿಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದು, ಅದೇ ಮಾದರಿಯಲ್ಲಿ ಹಿರಿಯರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ನೀಡುವ ಲೆಕ್ಕಾಚಾರ ಹೈಕಮಾಂಡ್‌ನದ್ದಾಗಿದೆ.

ಸದ್ಯ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬಲ ಹೆಚ್ಚಾಗಿದ್ದು, ಸದ್ಯಕ್ಕಿರುವ ಸಭಾಪತಿಯನ್ನು ಕೆಳಗಿಳಿಸಿ, ಬಿಜೆಪಿಗೆ ಸಭಾಪತಿ ಸ್ಥಾನ ಪಡೆಯುವ ಬಗ್ಗೆ ಯೋಚನೆಗಳು ನಡೆಯುತ್ತಿವೆ. ಸದ್ಯ ಬಿಜೆಪಿಯ 31 ಸದಸ್ಯರಿದ್ದರೆ, ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಸೇರಿ, ಕಾಂಗ್ರೆಸ್‌ನ 28 ಸದಸ್ಯರಿಂದಾಗಿ ಜೆಡಿಎಸ್‌ನ 13 ಸದಸ್ಯರಿದ್ದು, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಜೆಡಿಎಸ್‌ನ ಎಸ್‌.ಎಲ್‌ ಧರ್ಮೇಗೌಡ ಅವರನ್ನೇ ಉಪಸಭಾಪತಿಯಾಗಿ ಮುಂದುವರಿಸಿದಲ್ಲಿ, ಸಭಾಪತಿ ಸ್ಥಾನಕ್ಕೆ ಜೆಡಿಎಸ್‌ ಬೆಂಬಲ ಪಡೆಯಬಹುದು ಎನ್ನುವ ಯೋಚನೆಯೂ ಪಕ್ಷದ ಮುಖಂಡರದ್ದಾಗಿದೆ.

ADVERTISEMENT

ಕುತೂಹಲ ಮೂಡಿಸಿದ ಸಂತೋಷ್‌ ಭೇಟಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮಂಗಳವಾರ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕೆಲವು ನಾಯಕರೊಂದಿಗೆ ಚರ್ಚಿಸಿದ್ದು, ಬಿಜೆಪಿಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸಂತೋಷ್‌ ಅವರು ಉಡುಪಿಗೆ ಬಂದಿದ್ದು, ಅಲ್ಲಿಂದ ಬೆಂಗಳೂರಿಗೆ ಮರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಇದೊಂದು ಅನೌಪಚಾರಿಕ ಭೇಟಿ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಸಂತೋಷ್‌ ಅವರು, ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಸಂದರ್ಭದಲ್ಲಿ ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್‌ ಎಂ., ಶಾಸಕ ವೇದವ್ಯಾಸ ಕಾಮತ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್‌ ದಿವಾಕರ್‌, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಧೀರ್‌ಶೆಟ್ಟಿ ಕಣ್ಣೂರು, ಮಾಧ್ಯಮ ವಕ್ತಾರ ಜಗದೀಶ ಶೇಣವ ಅವರು ಸಂತೋಷ್‌ ಅವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.