ADVERTISEMENT

ಪಣಂಬೂರಿನಲ್ಲಿ ಮುಳುಗಿದ ಬೋಟ್: ಕಾರ್ಮಿಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 14:07 IST
Last Updated 7 ಆಗಸ್ಟ್ 2022, 14:07 IST
ಮುಳುಗಿದ ಬೋಟ್‌ನಿಂದ ಸುರಕ್ಷಿವಾಗಿ ದಡ ಸೇರಿದ ಕಾರ್ಮಿಕರು
ಮುಳುಗಿದ ಬೋಟ್‌ನಿಂದ ಸುರಕ್ಷಿವಾಗಿ ದಡ ಸೇರಿದ ಕಾರ್ಮಿಕರು   

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಟ್ರೋಲಿಂಗ್ ಬೋಟ್‌, ಇಲ್ಲಿನ ಪಣಂಬೂರು ಬಳಿ ಮುಳುಗಿದ್ದು ಅದರಲ್ಲಿದ್ದ ಎಲ್ಲ 11 ಮಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಲಾಗಿದೆ.

ಶನಿವಾರ ಸಂಜೆ ಮಂಗಳೂರು ಧಕ್ಕೆಯಿಂದ ಹೊರಟ, ಉರ್ವ ನಿವಾಸಿ ಸುಂದರ ಪುತ್ರನ್ ಅವರ ಪುತ್ರ ಕೃಷ್ಣಕುಮಾರ್ ಮಾಲೀಕತ್ವದ ಬೋಟ್, ಪಣಂಬೂರಿನಿಂದ 90 ಮೀಟರ್ ಆಳಸಮುದ್ರದಲ್ಲಿ ಮುಳುಗಿದೆ. ಹತ್ತಿರದಲ್ಲಿ ಮತ್ತೊಂದು ಬೋಟ್ ಕೂಡ ಇತ್ತು. ಅವರು ಸಮೀಪ ತಲುಪುವಷ್ಟರಲ್ಲಿ ಬೋಟ್ ಆಳಕ್ಕೆ ಸಾಗುತ್ತ, ಕೊನೆಗೆ ಒಂದು ಭಾಗ ಮಾತ್ರ ಕಾಣಿಸುತ್ತಿತ್ತು. ತಕ್ಷಣ ಅವರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಎಲ್ಲರನ್ನೂ ರಕ್ಷಿಸಿ ತಮ್ಮ ಬೋಟ್‌ನಲ್ಲಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.

‘ಹವಾಮಾನ ವೈಪರೀತ್ಯದಿಂದ ನಿಯಂತ್ರಣ ಕಳೆದುಕೊಂಡು ಬೋಟ್ ಮುಳುಗಿದೆ. ಸಮೀಪದ ಬೋಟ್‌ನವರು ತಕ್ಷಣ ಸ್ಪಂದಿಸಿದ್ದರಿಂದ ಅನಾಹುತ ತಪ್ಪಿದೆ’ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಮುಳುಗಿದ ಬೋಟ್ ಮೇಲೆತ್ತಲು ಆಗುವುದಿಲ್ಲ. ಕರಾವಳಿ ಕಾವಲು ಪಡೆಯ ಠಾಣೆಗೆ ಮಾಹಿತಿ ನೀಡಿ ಕಾರ್ಮಿಕರೆಲ್ಲರೂ ತಮ್ಮೂರು ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ’ ಎಂದು ಬೋಟ್ ಮಾಲೀಕರು ತಿಳಿಸಿದ್ದಾರೆ.

ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಸೋಮವಾರದವರೆಗೆ ಮೀನುಗಾರಿಕೆಗೆ ತೆರಳಬಾರದು ಮತ್ತು ಈಗಾಗಲೇ ಸಮುದ್ರಕ್ಕೆ ತೆರಳಿರುವವರು ತಕ್ಷಣ ವಾಪಸ್ ಬರಬೇಕು ಎಂದು ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.