ADVERTISEMENT

ಸಾಹಿತ್ಯಕ್ಕೆ ಬದುಕು ರೂಪಿಸುವ ಗಟ್ಟಿತನವಿದೆ

ಮಸಾಲೆ ಮೀಮಾಂಸೆ ಕೃತಿ ಬಿಡುಗಡೆ: ಪ್ರೊ. ಬಿ. ಎ. ವಿವೇಕ ರೈ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:53 IST
Last Updated 19 ಡಿಸೆಂಬರ್ 2018, 12:53 IST
ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಬುಧವಾರ ಉಪನ್ಯಾಸಕ ಡಾ. ಸಂಪೂರ್ಣಾನಂದ ಬಳ್ಕೂರು ಅವರ ಮಸಾಲೆ ಮೀಮಾಂಸೆ ಕೃತಿಯನ್ನು  ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ ಬಿಡುಗಡೆ ಮಾಡಿದರು.
ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಬುಧವಾರ ಉಪನ್ಯಾಸಕ ಡಾ. ಸಂಪೂರ್ಣಾನಂದ ಬಳ್ಕೂರು ಅವರ ಮಸಾಲೆ ಮೀಮಾಂಸೆ ಕೃತಿಯನ್ನು  ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ ಬಿಡುಗಡೆ ಮಾಡಿದರು.   

ಮಂಗಳೂರು: ಸಾಹಿತ್ಯಕ್ಕೆ ಬದುಕು ರೂಪಿಸುವ ಗಟ್ಟಿತನ ಇದೆ. ಸಾಹಿತ್ಯವನ್ನು ಲವಲವಿಕೆಯಿಂದ ಓದುವ ಗುಣ ಬೆಳೆಸಿಕೊಂಡಾಗ ಅದರ ಆಳ, ಹರಿವು ತಿಳಿಯುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ ಹೇಳಿದರು.

ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸಕ ಡಾ. ಸಂಪೂರ್ಣಾನಂದ ಬಳ್ಕೂರು ಅವರ ಮಸಾಲೆ ಮೀಮಾಂಸೆ ಲಲಿತ ಪ್ರಬಂಧಗಳ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡದ ಎಲ್ಲ ಪ್ರಾದೇಶಿಕ ಭಾಷೆಗಳೂ ಸೃಜನಶೀಲ ಭಾಷೆಗಳು. ಈ ಭಾಷೆಗಳಲ್ಲಿಯೇ ಬದುಕಿನ ಒಳ-ಹೊರಗುಗಳನ್ನು ಬರಹಕ್ಕೆ ಬಳಸಿಕೊಂಡರೆ ಉತ್ತಮ ಲೇಖಕನಾಗಿ ಬೆಳೆಯಲು ಸಾಧ್ಯವಿದೆ. ಸಾಹಿತ್ಯ ಎನ್ನುವುದು ಯಾವುದನ್ನೂ ನೇರವಾಗಿ ಹೇಳುವುದಿಲ್ಲ. ಆದರೆ, ಇಡೀ ಸಮಾಜಕ್ಕೆ ಚಿಕಿತ್ಸಾತ್ಮಕ ಔಷಧಯಾಗುವ ಪರೋಕ್ಷ ಸಂದೇಶ ಅದರಲ್ಲಿ ಮಿಶ್ರಣವಾಗಿರುತ್ತದೆ ಎಂದು ಅವರು ಹೇಳಿದರು.

ADVERTISEMENT

‘ಮಸಾಲೆ ಮೀಮಾಂಸೆ’ ಕೃತಿಯೂ ಇದೇ ನೆಲೆಗಟ್ಟಿನಲ್ಲಿ ರೂಪಿತವಾಗಿದೆ. ಧರ್ಮ, ಹಣ, ಮೂಢನಂಬಿಕೆ, ಮೋಸ ವಂಚನೆ ಮತ್ತು ಅವುಗಳ ಮೂಲಕ ಮಾಡುವ ಲಾಭಗಳಿಂದ ಬದುಕು ಅರ್ಥ ಕಳೆದುಕೊಂಡು ಕಲುಷಿತಗೊಂಡಿರುವ ಜೀವನ ವಿಷಾದದ ವ್ಯಂಗ್ಯ ಪುಸ್ತಕದಲ್ಲಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಕೃತಿ ಅರ್ಥ ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಕೃತಿ ಪರಿಚಯ ಮಾಡಿದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ ಮಾತನಾಡಿ, ‘ಮಸಾಲೆ ಮೀಮಾಂಸೆ’ ಸಂಕಲನವು ಬದುಕಿನ ಒಂದು ಭಾಗವೇ ಆಗಿದೆ. ಮಸಾಲೆ ದೋಸೆ ಮುಂದಿಟ್ಟುಕೊಂಡು ಸಮಾಜವನ್ನು ಯಾವ ಕೋನದಿಂದ ನೋಡಬೇಕು ಎಂಬ ಹಸಿವನ್ನು ಲೇಖಕರು ತಮ್ಮ ಮೀಮಾಂಸೆ ಪುಸ್ತಕದಲ್ಲಿ ಅಡಕಗೊಳಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಡಾ. ಸಿ. ಸಿ. ಎಂ. ಜೆಸ್ವೀನಾ ಮಾತನಾಡಿ, ಮಸಾಲೆ ಮೀಮಾಂಸೆ ಕೃತಿಯು ಉತ್ತಮವಾಗಿ ಮೂಡಿ ಬಂದಿದ್ದು, ವಿದ್ಯಾರ್ಥಿ ಮತ್ತು ಯುವಜನರ ಓದಿಗೆ ಪೂರಕ ಎಂದು ಹೇಳಿದರು.

ಲೇಖಕ ಡಾ. ಸಂಪೂರ್ಣಾನಂದ ಬಳ್ಕೂರು ಮಾತನಾಡಿ, ಪುಸ್ತಕದ ಬಗ್ಗೆ ಈಗಲೇ ನಾನು ಎನನ್ನು ಹೇಳಲಾರೆ, ಇದನ್ನು ಕೈಗೆ ಇಟ್ಟಿದ್ದೇನೆ. ಅದನ್ನು ನೀವು ಓದಿದ ಮೇಲೆ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಮಾಹಿತಿ ನೀಡಿ. ನೈಜ ಜೀವನದ ಹಲವಾರು ಅಂಶಗಳಿಗೆ ಕಾಲ್ಪನಿಕ ರೂಪಗಳನ್ನು ಜೋಡಿಸಿ ಮೀಮಾಂಸೆ ಕೃತಿಗೆ ಜೀವ ತುಂಬುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ ‘ವಿಕಾಸ’ದ ಅಧ್ಯಕ್ಷ ಪ್ರೊ. ಕೃಷ್ಣಮೂರ್ತಿ ಪಿ. ಸ್ವಾಗತಿಸಿದರು. ಅನನ್ಯಾ ನಿರೂಪಿಸಿದರು.
ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ ‘ವಿಕಾಸ’, ಆಕೃತಿ ಆಶಯ ಪಬ್ಲಿಕೇಶನ್ಸ್, ಸಂತ ಆಗ್ನೆಸ್ ಕಾಲೇಜು ಕನ್ನಡ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.

ಪ್ರಕಾಶಕ ಕಲ್ಲೂರು ನಾಗೇಶ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.