ADVERTISEMENT

‘ಅಂತರಾತ್ಮ’ದಲ್ಲಿ ದೇಹ–ಮನಸ್ಸಿನ ಸೂಕ್ಷ್ಮ ಅರಿವು: ಡಾ. ರವಿ ರಾವ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:53 IST
Last Updated 25 ಜೂನ್ 2022, 4:53 IST
ಕೃತಿಯನ್ನು ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ರವಿರಾವ್ (ಎಡದಿಂದ ನಾಲ್ಕನೆಯವರು) ಬಿಡುಗಡೆ ಮಾಡಿದರು. ಶ್ರೀನಾಥ್ ರಾವ್‌, ಸಾವಿತ್ರಿ, ಲೇಖಕ ಡಾ.ಧನಂಜಯ ಭಟ್‌ ಮತ್ತು ಶ್ರುತಿ ಭಟ್ ಇದ್ದಾರೆ
ಕೃತಿಯನ್ನು ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ರವಿರಾವ್ (ಎಡದಿಂದ ನಾಲ್ಕನೆಯವರು) ಬಿಡುಗಡೆ ಮಾಡಿದರು. ಶ್ರೀನಾಥ್ ರಾವ್‌, ಸಾವಿತ್ರಿ, ಲೇಖಕ ಡಾ.ಧನಂಜಯ ಭಟ್‌ ಮತ್ತು ಶ್ರುತಿ ಭಟ್ ಇದ್ದಾರೆ   

ಮಂಗಳೂರು: ದೇಹ ಮತ್ತು ಮನಸ್ಸಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲುವುದರ ಮೂಲಕ ಮನೋದೈಹಿಕ ಸಮಸ್ಯೆಗಳನ್ನು ನಿಯಂತ್ರಿಸಲು ನೆರವಾಗುವ ವೈದ್ಯಕೀಯ ಕೃತಿಯನ್ನು ಗುರುವಾರ ಪತ್ರಿಕಾಭವನದಲ್ಲಿ ಬಿಡುಗಡೆ ಮಾಡಲಾಯಿತು.

ಡಾ.ಧನಂಜಯ ಭಟ್‌ ಅವರು ಬರೆದಿರುವ ಪುಸ್ತಕವನ್ನು ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ರವಿ ರಾವ್ ಬಿಡುಗಡೆ ಮಾಡಿದರು.

‘ಖಿನ್ನತೆ, ಗೀಳು ಮತ್ತಿತರ ಮಾನಸಿಕ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಇದೆ. ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಾರೆ. ಆದರೆ ಅಲ್ಸರ್‌, ಅಸ್ತಮಾ, ನಿದ್ರಾಹೀನತೆ, ಆಹಾರದ ಮೇಲಿನ ಅತಿಯಾದ ಆಸೆ, ತೂಕ ಇಳಿಸಿಕೊಳ್ಳವ ಭ್ರಮೆ, ಮೈಗ್ರೇನ್‌ ಮುಂತಾದ ಮನೋದೈಹಿಕ ಖಾಯಿಲೆಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಲ್ಲ. ಅವುಗಳಿಗೆ ಸ್ವಯಂ ಔಷಧಿ ತೆಗೆದುಕೊಳ್ಳುವವರೇ ಹೆಚ್ಚು. ಇದೇ ವೇಳೆ ವರ್ತನೆಯಲ್ಲಿನ ದೋಷ, ಸಂಬಂಧಗಳ ನಡುವಿನ ಬಿರುಕು, ವೈವಾಹಿಕ ಜೀವನದ ವೈಫಲ್ಯ ಇತ್ಯಾದಿಗಳಿಗೆ ಔಷಧಿ ಅಗತ್ಯವಿಲ್ಲ. ಅದನ್ನು ನಿಯಂತ್ರಿಸಲು ಇತರ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಪುಸ್ತಕದಲ್ಲಿ ಅಳವಡಿಸಲಾಗಿದೆ’ ಎಂದು ಧನಂಜಯ ತಿಳಿಸಿದರು.

ADVERTISEMENT

‘ಪುಸ್ತಕವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದಾಗಿದೆ. ಮೊದಲ ಭಾಗದಲ್ಲಿ ನನ್ನ ಒಂದು ದಶಕದ ವೈದ್ಯವೃತ್ತಿಯಲ್ಲಿ ಪಡೆದ ಅನುಭವನ್ನು ಭವ ಅನುಭವ ಎಂಬ ಹೆಸರಿನಲ್ಲಿ ದಾಖಲಿಸಲಾಗಿದೆ. ಇದರಲ್ಲಿ 10 ಅಧ್ಯಾಯಗಳಿವೆ. ಎರಡನೇ ಭಾಗವಾದ ಆಪ್ತ–ಪರಮಾಪ್ತವು ಆಪ್ತ ಸಲಹೆ, ಶಿಕ್ಷಣ ವ್ಯವಸ್ಥೆ, ಮಕ್ಕಳ ಕಲಿಕಾ ಸಾಮರ್ಥ್ಯ, ಬೌದ್ಧಿಕ ತಿಳಿವಳಿಗೆ ಇತ್ಯಾದಿ ಸೇರಿಕೊಂಡಿದೆ. ಮೂರನೇ ಭಾಗದಲ್ಲಿ ಜೀವನಸತ್ಯ ಎಂಬ ಆಯುರ್ವೇದ ಗ್ರಂಥದಲ್ಲಿರುವ ವೈದ್ಯಕೀಯ ಸುಭಾಷಿತಗಳ ಆಧಾರದಲ್ಲಿ ಕೆಲವು ಅಂಶಗಳನ್ನು ಬರೆಯಲಾಗಿದೆ’ ಎಂದು ಅವರು ವಿವರಿಸಿದರು.

ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜು ಉಪನ್ಯಾಸಕಿ ಡಾ. ಶ್ರುತಿ ಭಟ್‌, ಶ್ರೀನಾಥ್ ರಾವ್ ಮತ್ತು ಸಾವಿತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.