ADVERTISEMENT

‘ಇತಿಹಾಸಕ್ಕೆ ಧರ್ಮ ಲೇಪ ಬೇಡ’

ಸೆಕ್ಯುಲರ್ ಸೇನಾನಿ ಸುಭಾಷ್‌ಚಂದ್ರ ಬೋಸ್ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 4:59 IST
Last Updated 1 ಸೆಪ್ಟೆಂಬರ್ 2019, 4:59 IST
‘ಸೆಕ್ಯುಲರ್ ಸೇನಾನಿ ಸುಭಾಷ್‌ಚಂದ್ರ ಬೋಸ್‌’ ಕೃತಿಯನ್ನು ಮಂಗಳೂರಿನಲ್ಲಿ ಶನಿವಾರ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಬಿಡುಗಡೆ ಮಾಡಿದರು. ಧರ್ಮಗುರು ನೆಲ್ಸನ್ ಆಲ್ಮೇಡ, ‘ಪ್ರಜಾವಾಣಿ’ ಸಹ ಸಂಪಾದಕರಾದ ಕೃತಿಕಾರ ಬಿ.ಎಂ.ಹನೀಫ್‌, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಫ್ ಇದ್ದರು
‘ಸೆಕ್ಯುಲರ್ ಸೇನಾನಿ ಸುಭಾಷ್‌ಚಂದ್ರ ಬೋಸ್‌’ ಕೃತಿಯನ್ನು ಮಂಗಳೂರಿನಲ್ಲಿ ಶನಿವಾರ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಬಿಡುಗಡೆ ಮಾಡಿದರು. ಧರ್ಮಗುರು ನೆಲ್ಸನ್ ಆಲ್ಮೇಡ, ‘ಪ್ರಜಾವಾಣಿ’ ಸಹ ಸಂಪಾದಕರಾದ ಕೃತಿಕಾರ ಬಿ.ಎಂ.ಹನೀಫ್‌, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಫ್ ಇದ್ದರು   

ಮಂಗಳೂರು: ‘ರಾಜಪ್ರಭುತ್ವದಲ್ಲಿ ನಡೆದ ತಪ್ಪುಗಳನ್ನು ಹೆಕ್ಕಿ ಪ್ರಜಾಪ್ರಭುತ್ವದಲ್ಲಿ ಪ್ರಚಾರ ಮಾಡುವ ಅಥವಾ ಸಮರ್ಥಿಸುವ ಅಗತ್ಯಗಳಿಲ್ಲ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.

‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ.ಹನೀಫ್‌ ಅವರ ‘ಸೆಕ್ಯುಲರ್ ಸೇನಾನಿ ಸುಭಾಷ್‌ಚಂದ್ರ ಬೋಸ್‌’ ಕೃತಿಯನ್ನು, ನಗರದಲ್ಲಿ ಶನಿವಾರ ಕನ್ನಡ ಓದುಗ ಬಳಗ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ರಾಜರ ನಡುವೆ ಯುದ್ಧಗಳು ಪ್ರಭುತ್ವಕ್ಕಾಗಿ ನಡೆದಿದೆಯೇ ಹೊರತು, ಧಾರ್ಮಿಕವಾಗಿ ಅಲ್ಲ. ಅದನ್ನು ಕೆಣಕುವ, ಅಪರಾಧಿಗಳನ್ನು ಸಮುದಾಯಕ್ಕೆ ಲೇಪಿತ ಮಾಡುವ ಹಾಗೂ ‘ಮೆಳ್ಳೆಗಣ್ಣಿನ ಇತಿಹಾಸ’ದ ಅಗತ್ಯವಿಲ್ಲ’ ಎಂದರು.

ADVERTISEMENT

‘ಈ ವಿಚಾರವನ್ನು ಹನೀಫ್‌ ಕೃತಿಯಲ್ಲಿ ಪ್ರಸ್ತಾಪಿಸಿದ್ದು, ಹಿಂದೂ ಪೂಜೆಗಾಗಿ ಉಪವಾಸ ಮಾಡಿದ, ಕ್ರೈಸ್ತ ಮಡದಿ ಮತ್ತು ಮುಸ್ಲಿಂ ಆಪ್ತ ಕಾರ್ಯದರ್ಶಿಯನ್ನು ಹೊಂದಿದ್ದ ಬೋಸ್ ಸೆಕ್ಯುಲರ್ ಆಗಿದ್ದರು. ಬ್ರಿಟಿಷ್ ಪ್ರಭುತ್ವದ ವಿರುದ್ಧ ಹೋರಾಡಿದ್ದರು. ಜರ್ಮನಿ ಮತ್ತು ಜಪಾನ್‌ ಮಾತ್ರವೇ ಬ್ರಿಟಿಷ್‌ ವಿರುದ್ಧವಿದ್ದು, ಬೋಸ್‌ ಹಿಟ್ಲರ್‌ನನ್ನು ಭೇಟಿಯಾಗಿದ್ದರು. ಆದರೆ, ಆತನ ಮನೋಧರ್ಮವನ್ನು ಒಪ್ಪಿರಲಿಲ್ಲ’ ಎಂದು ವಿವರಿಸಿದರು.

‘ಇಂತಹ ಸೂಕ್ಷ್ಮ ವಿಚಾರಗಳನ್ನು ಓದಿನ ಮೂಲಕ ತಿಳಿದುಕೊಳ್ಳಬೇಕು. ಆದರೆ, ಇಂದು ಓದಿಗಿಂತ ಬೀಸು ಹೇಳಿಕೆಗಳು ಹೆಚ್ಚಾಗಿದ್ದು, ಅಪಾಯಕಾರಿಯಾಗಿದೆ’ ಎಂದರು.

‘ಸಣ್ಣ ಸಣ್ಣ ಸಂಗತಿಗಳು ನಮ್ಮನ್ನು ಕೋಮುವಾದಿ ಅಥವಾ ಜಾತ್ಯತೀತವಾದಿ ಮಾಡುತ್ತವೆ. ನಮ್ಮದಲ್ಲದ ಪ್ರಾಮಾಣಿಕ ವ್ಯಕ್ತಿ–ವಿಚಾರಗಳನ್ನು ಗೌರವಿಸುವ, ಸಹಬಾಳ್ವೆಯೇ ಸೆಕ್ಯುಲರಿಸಂ’ ಎಂದರು.

ಜೆಪ್ಪು ಸೇಂಟ್ ಜೋಸೆಫ್ ಸೆಮಿನರಿಯ ಧರ್ಮಗುರು ನೆಲ್ಸನ್‌ ಅಲ್ಮೇಡ ಮಾತನಾಡಿ, ‘ ಜಾತಿ, ಧರ್ಮಗಳೆಲ್ಲ ನಮ್ಮ ವೈಯಕ್ತಿಕ ಬದುಕಿಗೆ ಸೀಮಿತವಾಗಿ, ಜಾತ್ಯತೀತತೆ, ಸಹಬಾಳ್ವೆ, ಸಮಾಜವಾದಗಳು ಸಾರ್ವಜನಿಕ ಬದುಕಿನ ಭಾಗವಾಗಬೇಕು’ಎಂದರು.

‘ಓದುಗರಿಲ್ಲ ಎಂಬ ಆತಂಕ ಬೇಡ. ಉತ್ತಮ ವಿಚಾರಗಳ ಕೃತಿಗೆ ಓದುಗ, ಬಿಡುಗಡೆಗೆ ಸಹೃದಯಿಗಳು ಇದ್ದೇ ಇರುತ್ತಾರೆ. ಇದು ಸರಣಿಯ ಮೊದಲ ಕೃತಿಯಾಗಿದ್ದು, ಒಟ್ಟು ಎಂಟು ಕೃತಿಗಳು ಬರಲಿವೆ’ ಎಂದು ಬಿ.ಎಂ.ಹನೀಫ್ ಹೇಳಿದರು.

ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಫ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.