ಮಂಗಳೂರು: ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಲು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಇದೇ 2ರಿಂದ 12ರವರೆಗೆ ಬೂತ್ ವಿಜಯ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ‘ಜಿಲ್ಲೆಯ 1,861 ಬೂತ್‌ಗಳಿದ್ದು, ಅಭಿಯಾನದ ಅವಧಿಯಲ್ಲಿ ಪ್ರತಿ ಬೂತ್‌ನಲ್ಲೂ ಸಭೆ ನಡೆಸಲಿದ್ದೇವೆ. ಪಕ್ಷದತ್ತ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಗರದ ರಮಣ ಪೈ ಸಭಾಂಗಣದಲ್ಲಿ ಇದೇ 2ರಂದು ಬೆಳಿಗ್ಗೆ 10ಕ್ಕೆ ಈ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ’ ಎಂದರು.
‘ಪ್ರತಿ ಬೂತ್‌ನ ಮತದಾರರ ಪಟ್ಟಿಯ ಪುಟಕ್ಕೆ ಒಬ್ಬರಂತೆ ಪೇಜ್ ಪ್ರಮುಖ್ ಕಾರ್ಯಕರ್ತನನ್ನು ನೇಮಿಸಿದ್ದೇವೆ. ಅವರ ಕೊರತೆ ಇರುವ ಯಾವ ಬೂತ್‌ಗಳಿಗೆ ಹೊಸತಾಗಿ ನೇಮಕ ಮಾಡಲಿದ್ದೇವೆ. ಒಬ್ಬ ಪೇಜ್ ಪ್ರಮುಖ್ ಕಾರ್ಯಕರ್ತ ಕನಿಷ್ಠ 30 ಮತದಾರರ ಸಂಪರ್ಕ ಹೊಂದಿರಬೇಕು. ಬಿಜೆಪಿ ಅಭ್ಯರ್ಥಿಗೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತ ಪಡೆಯಲು ಪ್ರಯತ್ನಿಸಬೇಕು ಎಂಬ ಉದ್ದೇಶ ನಮ್ಮದು. ಜಿಲ್ಲೆಯಲ್ಲಿ ಇಂತಹ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲಿ ಅನೇಕ ವಾಟ್ಸಾಪ್ ಗ್ರೂಪ್‌ಗಳನ್ನು ಕಾರ್ಯಕರ್ತರೇ ನಿರ್ವಹಿಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
‘ಈ ಅಭಿಯಾನದ ಜೊತೆಗೆ ‘ನಮ್ಮ ಮನೆ– ಬಿಜೆಪಿ ಮನೆ’ ಎಂಬ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ. ಬೂತ್ ಮಟ್ಟದಲ್ಲಿ ಕನಿಷ್ಠ 25 ಮನೆಗಳಲ್ಲಾದರೂ ಪಕ್ಷದ ಧ್ವಜ ಹಾರಾಡುವಂತೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಪ್ರಸಾರಕ್ಕೆ ವ್ಯವಸ್ಥೆ ಮಾಡಿ, ಆದಷ್ಟು ಹೆಚ್ಚು ಜನರಿಗೆ ಇದನ್ನು ತಲುಪಿಸಬೇಕು ಎಂದು ಸೂಚನೆ ನೀಡಿದ್ದೇವೆ’ ಎಂದರು.
ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಹಂಚುವಾಗ ಗುಜರಾತ್ ಮಾದರಿಯಲ್ಲೇ ಹೊಸಮುಖಗಳಿಗೆ ಹೆಚ್ಚಿನ ಅವಕಾಶ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ನಮ್ಮ ಹಂತದಲ್ಲಿ ತೀರ್ಮಾನ ಕೈಗೊಳ್ಳುವುದಿಲ್ಲ. ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಅಭ್ಯರ್ಥಿಯ ಆಯ್ಕೆ ನಡೆಯಲಿದೆ’ ಎಂದರು.
ಗೃಹ ಸಚಿವರ ಆರಗ ಜ್ಞಾನೇಂದ್ರ ಅವರ ‘ಅಡಿಕೆ ಬೆಳೆಗೆ ಉತ್ತೇಜನ ನೀಡುವ ಅಗತ್ಯ ಇಲ್ಲ’ ಎಂಬ ಹೇಳಿಕೆಗೆ ವಿರೋಧ ವ್ಯಕ್ತವಾಗಿರುವ ಕುರಿತ ಪ್ರತಿಕ್ರಿಯಿಸಿದ ಅವರು, ‘ನಮ್ಮ ಪಕ್ಷವು ಯಾವತ್ತೂ ರೈತರ ಪರ’ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು, ಪಕ್ಷದ ಮುಖಂಡರಾದ ಕಸ್ತೂರಿ ಪಂಜ, ಶಾಸಕ ವೇದವ್ಯಾಸ ಕಾಮತ್, ಜಗದೀಶ ಶೇಣವ ಹಾಗೂ ವಿಜಯ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.