ADVERTISEMENT

ಮಿದುಳು ಜ್ವರ: ನಿಯಂತ್ರಣ: ಲಸಿಕಾ ಅಭಿಯಾನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 13:26 IST
Last Updated 3 ಡಿಸೆಂಬರ್ 2022, 13:26 IST
ಡಾ.ಕಿಶೋರ್ ಕುಮಾರ್
ಡಾ.ಕಿಶೋರ್ ಕುಮಾರ್   

ಮಂಗಳೂರು: ‘ಮಿದುಳು ಜ್ವರ ಬಾರದಂತೆ ತಡೆಯಲು1 ರಿಂದ 15 ವರ್ಷದ ಮಕ್ಕಳಿಗೆ ಜಪಾನೀಸ್‌ ಎನ್ಸಫಲೈಟಿಸ್‌ (ಜೆ.ಇ) ಲಸಿಕೆ ನೀಡುವ ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ 5ರಿಂದಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.‌ಕಿಶೋರ್ ಕುಮಾರ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರಾಜ್ಯದ 10 ಜಿಲ್ಲೆಗಳಲ್ಲಿ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದ ಅಡಿಯಲ್ಲೇ ಮಿದುಳು ಜ್ವರ ಲಸಿಕೆಯನ್ನು 9 ತಿಂಗಳು ಮತ್ತು 16 ತಿಂಗಳ ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಡಿ ಈ ಲಸಿಕೆ ನೀಡುತ್ತಿರಲಿಲ್ಲ ಆದರೆ ಇನ್ನು ಮುಂದೆ ನೀಡಲಾಗುತ್ತದೆ. ಅದರ ಜೊತೆಗೆ 1ರಿಂದ 15 ವರ್ಷದೊಳಗಿನ ಮಕ್ಕಳಿಗೂ ಈ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 4,73,770 ಮಕ್ಕಳು ಲಸಿಕೆ ಪಡೆಯಲು ಅರ್ಹರು. 3,514 ಲಸಿಕಾ ಕೇಂದ್ರಗಳಲ್ಲಿ ಇದೇ 5ರಿಂದ ಲಸಿಕೆ ನೀಡಲಾಗುತ್ತದೆ. ಮೊದಲ ವಾರ ಎಲ್ಲಾ ಶಾಲೆಗಳಲ್ಲಿ ಲಸಿಕೆ ನೀಡಲಿದ್ದೇವೆ. ನಂತರದ ಎರಡು ವಾರಗಳಲ್ಲಿ ಎಲ್ಲ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದೇವೆ. ನಗರದ ಲೇಡಿಹಿಲ್‌ನ ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

ಕ್ಯುಲೆಕ್ಸ್‌ ಜಾತಿಯ ಸೊಳ್ಳೆಯ ಮೂಲಕ ಮಿದುಳು ಜ್ವರ ಹರಡುತ್ತದೆ. ವಲಸೆ ಹಕ್ಕಿಗಳು ಹಾಗೂ ಹಂದಿಗಳು ಈ ರೋಗಾಣುವಾಹಕಗಳು. ಈ ರೋಗಪೀಡಿತ ಮಕ್ಕಳಲ್ಲಿ ಶೇ 20 ರಿಂದ ಶೇ 30 ರಷ್ಟು ಮಕ್ಕಳು ಮರಣ ಹೊಂದುವ ಸಂಭವವಿದೆ. ಶೇ 40 ರಿಂದ ಶೇ 50ರಷ್ಟು ರೋಗಪೀಡಿತರಲ್ಲಿ ನರ ದೌರ್ಬಲ್ಯ, ಬುದ್ಧಿಮಾಂಧ್ಯತೆಯಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿದೆ. ಜಿಲ್ಲೆಯಲ್ಲಿ 2018, 2019, 2020ರಲ್ಲಿ ತಲಾ ಒಂದು ಮಿದುಳು ಜ್ವರ ಪ್ರಕರಣಗಳು ವರದಿಯಾಗಿದ್ದವು.ಚಿಕಿತ್ಸೆ ಬಳಿಕ ಈ ಮೂರೂ ಮಕ್ಕಳ ಆರೋಗ್ಯ ಸುಧಾರಿಸಿದೆ’ ಎಂದು ಮಾಹಿತಿ ನೀಡಿದರು.

‘ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು ರೋಗ ಲಕ್ಷಣಗಳು. ಮೆದುಳು ಊತಗೊಂಡು ಸಾವು ಸಂಭವಿಸಬಹುದು.ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಲಸಿಕೆ ಪಡೆಯುವುದು ಅತ್ಯವಶ್ಯಕ’ ಎಂದರು.
ಡಾ. ರಾಜೇಶ್, ’ಕ್ಯಾನ್ಸರ್‌, ಅಪಸ್ಮರ, ಮೂತ್ರನಾಳಗಳಿಗೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಲಸಿಕೆ ಹಾಕಿಸಿಕೊಳ್ಳುವ ಮುನ್ನ ತಜ್ಞವೈದ್ಯರ ಸಲಹೆ ಪಡೆಯಬೇಕು‘ ಎಂದರು.

–0–

ಮುಖ್ಯಾಂಶ

ಲಸಿಕೆ ಪಡೆಯುವ ಮಕ್ಕಳ ಎಡಗೈ ಹೆಬ್ಬೆರಳಿಗೆ ಗುರುತು

ಸಣ್ಣ ಮಕ್ಕಳಿಗೆ ತೊಡೆಗೆ ಲಸಿಕೆ ನೀಡಲಾಗುತ್ತದೆ

ದೊಡ್ಡ ಮಕ್ಕಳಿಗೆ ತೋಳುಗಳಿಗೆ ಲಸಿಕೆ ನೀಡಲಾಗುತ್ತದೆ

–0–

‘ನಮ್ಮ ಕ್ಲಿನಿಕ್‌’ ತಿಂಗಳ ಅಂತ್ಯದೊಳಗೆ ಆರಂಭ

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಕಡೆ ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಅವುಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ’ ಎಂದು ಡಾ.ಕಿಶೋರ್‌ ಕುಮಾರ್‌ ತಿಳಿಸಿದರು.

‘ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೋಳೂರು ಬಳಿಯ ಬೊಕ್ಕಪಟ್ಣ, ಪಚ್ಚನಾಡಿ, ಕೋಡಿಕಲ್‌, ಸೂಟರ್‌ಪೇಟೆ, ಕುಂಜತ್ತಬೈಲ್‌, ಮೀನಕಳಿಯ, ಹೊಯ್ಗೆಬಜಾರ್‌, ಪುತ್ತೂರು, ಮೂಡುಬಿದಿರೆ, ಕಡಬ, ಉಳ್ಳಾಲ ಬಳಿಯ ಪೆರ್ಮನ್ನೂರು, ಸುಳ್ಯದ ದುಗ್ಗಲಡ್ಕದಲ್ಲಿ ನಮ್ಮ ಕ್ಲಿನಿಕ್‌ ಆರಂಭವಾಗಲಿದೆ. ಇವುಗಳ ವೈದ್ಯರು ಹಾಗೂ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.