2025-26ನೇ ಸಾಲಿನ ಬಜೆಟ್ ಪ್ರತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: ಜಿಲ್ಲೆಯ ಬಹುವರ್ಷಗಳ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಪುತ್ತೂರಿನ ಸರ್ಕಾರಿ ಆಸ್ಪತ್ರೆ ಉನ್ನತೀಕರಣ, ಕಡಲ್ಕೊರೆತ ತಡೆಗೆ ಯೋಜನೆ, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೊ, ಕೋಸ್ಟಲ್ ಬರ್ತ್ ನಿರ್ಮಾಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಬಜೆಟ್‌ನಲ್ಲಿ ಭರಪೂರ ಯೋಜನೆಗಳು ದೊರೆತಿವೆ.
ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಉದ್ದೇಶದಿಂದ ಪ್ರಸ್ತುತ ಇರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಕ್ರಮವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ನೇತ್ರಾವತಿ ನದಿಗೆ ಎರಡು ಸೇತುವೆಗಳ ನಿರ್ಮಾಣ, ಉಳ್ಳಾಲದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿಯು ಕಾಲೇಜು ಸ್ಥಾಪನೆ, ಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಜಲಸಾರಿಗೆ ಸಂಗ್ರಹಾಲಯ ಮತ್ತು ಅನುಭವ ಕೇಂದ್ರ ಸ್ಥಾಪನೆ, ಪಿಲಿಕುಳದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರರಾಷ್ಟ್ರೀಯ ಯುವಕರ ತರಬೇತಿ ಕೇಂದ್ರಕ್ಕೆ ₹2 ಕೋಟಿ ಅನುದಾನವು ಬಜೆಟ್‌ನಲ್ಲಿ ಸೇರಿಕೊಂಡಿದೆ.
ರಾಜ್ಯದ ವಿವಿಧ ಭಾಗಗಳ ತಾಲ್ಲೂಕು ಆಸ್ಪತ್ರೆ ಜೊತೆಗೆ, ಮಂಗಳೂರಿನ ವೆನ್ಲಾಕ್ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆ ನವೀಕರಣಕ್ಕೆ ಬಜೆಟ್‌ನಲ್ಲಿ ₹650 ಕೋಟಿ ಮೀಸಲಿಡಲಾಗಿದೆ.
ಕಡಲ್ಕೊರೆತ ತಡೆಗೆ ಚೆನ್ನೈ ಐಐಟಿ ತಜ್ಞರು ಶೋರ್‌ಲೈನ್ ಮ್ಯಾನೇಜ್‌ಮೆಂಟ್ ಪ್ಲಾನ್ ಅನ್ನು ತಯಾರಿಸಿದ್ದು, ಈ ಯೋಜನೆ ಜಾರಿಗೊಳಿಸಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿ ₹200 ಕೋಟಿ ವೆಚ್ಚ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಕಿಯಾಗಿರುವ ಕಾಮಗಾರಿ: ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಸಂಬಂಧ ಎಪಿಎಂಸಿ ₹35 ಕೋಟಿ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದ್ದರೂ, ಆರ್ಥಿಕ ಅನುಮತಿ ದೊರತಿಲ್ಲ.
ಮಂಗಳೂರು ಬಂದರಿನಿಂದ ಬೆಂಗಳೂರಿಗೆ ಆರ್ಥಿಕ ಕಾರಿಡಾರ್ ನಿರ್ಮಾಣದ ಬಗ್ಗೆ ಕಳೆದ ಬಜೆಟ್‌ನಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಈ ಬಗ್ಗೆ ಪ್ರಾಥಮಿಕ ಚಟುವಟಿಕೆ ಕೂಡ ಪ್ರಾರಂಭವಾಗಿಲ್ಲ. ಹಳೆ ಮಂಗಳೂರು ಬಂದರಿನಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆ ಆರಂಭದ ಬಗ್ಗೆ ಘೋಷಣೆ ಆಗಿದ್ದರೂ, ಈ ಬಗ್ಗೆಯೂ ಕ್ರಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಗೆ ದೊರೆತ ಪ್ರಮುಖ ಯೋಜನೆಗಳು
ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನಕ್ಕೆ ಮೀನುಗಾರಿಕಾ ನೀತಿ
ಮಂಗಳೂರಿನ ಮೀನುಗಾರಿಕೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯಾಬಲ ದ್ವಿಗುಣ
ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೊ, ಕೋಸ್ಟಲ್ ಬರ್ತ್, ಯೋಜನೆಗಳಿಗೆ ವಿಸ್ತೃತ ಯೋಜನೆ
ಮಂಗಳೂರು– ಉಡುಪಿ– ಮಣಿಪಾಲದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿ
ಕಿಯೋನಿಕ್ಸ್ ವತಿಯಿಂದ ಮಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯ ಒಳಗೊಂಡ ಜಾಗತಿಕ ತಂತ್ರಜ್ಞಾನ ಕೇಂದ್ರ (ಜಿಟಿಸಿ) ಸ್ಥಾಪನೆ
ಕರಾವಳಿ ಜಿಲ್ಲೆಗಳ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು
₹30 ಕೋಟಿ ನಿಗದಿ
ಎಸ್‌ಸಿ, ಎಸ್‌ಟಿ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ 50ರಷ್ಟು ಅಥವಾ ಗರಿಷ್ಠ ₹3 ಲಕ್ಷ ಆರ್ಥಿಕ ನೆರವು
ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಎಂಜಿನ್ ಬದಲಾಯಿಸಿ, ಹೊಸ ಇಂಜಿನ್ ಖರೀದಿಸಲು ಶೇ 50 ರಷ್ಟು ಸಹಾಯಧನ
ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುತ್ತಿರುವ ಮಲೆಕುಡಿಯ, ಕೊರಗ ಸೇರಿದಂತೆ ಪರಿಶಿಷ್ಟ ಪಂಗಡದ ಬುಡಕಟ್ಟು ಜನರಿಗೆ ಮೂಲ ಸೌಕರ್ಯ ಒದಗಿಸಲು ₹200 ಕೋಟಿ
ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆಗಳ ಕೆಜಿಟಿಟಿಐ ಕೇಂದ್ರಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ‘ಇಂಡಸ್ಟ್ರಿ–4.0’ಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಆಧಾರಿತ ಪಠ್ಯಕ್ರಮದೊಂದಿಗೆ ಹೊಸ ಪ್ರಯೋಗಾಲಯ ಸ್ಥಾಪನೆ
ಬಯಲುಸೀಮೆ, ಮಲೆನಾಡು, ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ ಒಟ್ಟಾರೆ ₹83 ಕೋಟಿ ಅನುದಾನ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆ ಬದಿ ಸೌಲಭ್ಯ ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶ ಬಳಕೆ
ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ₹3 ಕೋಟಿ
ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನ ಬಂಡಿ ಓಟ, ಕ್ರೀಡೆಗಳಿಗೆ ಉತ್ತೇಜನ ನೀಡುವ, ಬುಡಕಟ್ಟು ಜನರ ಕ್ರೀಡಾಕೂಟದ ಉದ್ದೇಶಕ್ಕೆ ₹2 ಕೋಟಿ ಅನುದಾನ
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭೂ ಕುಸಿತ ತಡೆಗೆ ₹200 ಕೋಟಿ ಅನುದಾನ
ವಾಹನ ಸಂಚಾರ ಮೇಲ್ವಿಚಾರಣೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ ಹಚ್ಚಿ ನಿಯಂತ್ರಿಸಲು ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 10 ಜಿಲ್ಲೆಗಳ 60 ಸ್ಥಳಗಳಲ್ಲಿ ₹50 ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಿದ್ಯುನ್ಮಾನ ಕ್ಯಾಮೆರಾ ಅಳವಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.