ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ 1980ರ ಜುಲೈ 3ರಂದು ಅಸ್ತಿತ್ವಕ್ಕೆ ಬಂದಿದೆ. 45 ವರ್ಷಗಳಾದರೂ ಪಾಲಿಕೆಗೆ ಸ್ವಂತ ಕಟ್ಟಡ ಉಪವಿಧಿ ಇರಲಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಚಟುವಟಿಕೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಬಲವಾದ ನಿಯಮಾವಳಿಗಳು ಬೇಕು ಎಂಬ ಬೇಡಿಕೆ ದಶಕಗಳಷ್ಟು ಹಳೆಯದು. ಈ ಬೇಡಿಕೆ ಈಡೇರಲು ಕಾಲ ಸನ್ನಿಹಿತವಾಗಿದೆ.
‘ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ಉಪವಿಧಿಗಳು 2019’ರ ಕರಡನ್ನು ಅಂತಿಮಗೊಳಿಸಲಾಗಿದ್ದು, ಅದಕ್ಕೆ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆಯನ್ನೂ ನೀಡಲಾಗಿದೆ. ಈ ಕರಡನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲಿ ಅನುಮೋದನೆಗೊಂಡ ಬಳಿಕ ಈ ಕುರಿತು ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟವಾಗಲಿದೆ. ಅದಕ್ಕೆ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಿದ ಬಳಿಕ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಲಿದೆ.
ಕಟ್ಟಡ ಉಪವಿಧಿಗಳಲ್ಲಿನ ಮುಖ್ಯಾಂಶಗಳು
ನಗರದಲ್ಲಿ ಪ್ರಸ್ತುತ ಅಪಾರ್ಟ್‌ಮೆಂಟ್ ಸಮುಚ್ಚಯವೆಂದರೆ 4ಕ್ಕಿಂತ ಹೆಚ್ಚು ವಸತಿ ಘಟಕಗಳಿರುವ ಕಟ್ಟಡ ಎಂದು ಪರಿಗಣಿಸಲಾಗುತ್ತಿದೆ. ಪ್ರಸ್ತಾಪಿತ ಉಪವಿಧಿಗಳ ಕರಡಿನಲ್ಲಿ 8ಕ್ಕಿಂತ ಹೆಚ್ಚು ವಸತಿ ಘಟಕಗಳನ್ನು ಅಪಾರ್ಟ್‌ಮೆಂಟ್ ಸಮುಚ್ಚಯ ಎಂದು ಪರಿಗಣಿಸಲಾಗಿದೆ.
ಸಾರ್ವಜನಿಕ ಉದ್ದೇಶಕ್ಕಾಗಿ ಸಮುದಾಯ ಸಭಾಂಗಣದ ನಿರ್ಮಿಸಲು ಪ್ರಸ್ತುತ 300 ಚ.ಮೀ.ಗಿಂತ ಹೆಚ್ಚಿನ ಕಟ್ಟಡ ವಿಸ್ತೀರ್ಣವನ್ನು ನಿರ್ಮಿಸಲು ಅವಕಾಶವಿಲ್ಲ. ಆದರೆ ಪ್ರಸ್ತಾವಿತ ಬೈಲಾದಲ್ಲಿ ಈ ನಿರ್ಬಂಧನೆಯನ್ನು ತೆಗೆದು ಹಾಕಲಾಗಿದೆ.
ಗಾರೆ, ನೆಲ, ನೆಲದ ಮರು ನಿರ್ಮಾಣ, ಸನ್‌ಶೇಡ್‌ನ ನಿರ್ಮಾಣ ಅಥವಾ ಮರುನಿರ್ಮಾಣ, ಪ್ಯಾರಪೆಟ್ ಗೋಡೆಗಳ ನಿರ್ಮಾಣ ಅಥವಾ ಮರುನಿರ್ಮಾಣವು 1.5 ಮೀಗಿಂತ ಹೆಚ್ಚು ಇರದಿದ್ದರೆ ಹಾಗೂ ವೈಟ್‌ವಾಶ್ ಅಥವಾ ಪೇಂಟಿಂಗ್ ಮಾಡಿಸುವ ಸಂದರ್ಭದಲ್ಲಿ ಪ್ರತ್ಯೇಕ ಪರವಾನಗಿ ಪಡೆಯುವ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ.
ವಿಶೇಷ ಸಂದರ್ಭ ಹೊರತುಪಡಿಸಿ ಆವರಣಗೋಡೆಯ ಗರಿಷ್ಠ ಎತ್ತರವು 1.5ಮೀ ಗಿಂತ ಹೆಚ್ಚಾಗಿ ನಿರ್ಮಿಸಬಾರದು ಷರತ್ತು ವಿಧಿಸಲಾಗಿದೆ. ಗೇಟಿನ ಯಾವುದೇ ಭಾಗವು ರಸ್ತೆ/ಚರಂಡಿಯ ಮೇಲೆ ನಿರ್ಮಿಸಬಾರದಾಗಿ ಹಾಗೂ ಗೇಟನ್ನು ರಸ್ತೆಯ ಕಡೆಗೆ ತೆರೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
500ಚ.ಮೀ ಗಿಂತ ಹೆಚ್ಚಿನ ಎಲ್ಲಾ ಕಟ್ಟಡಗಳಲ್ಲಿ ಕನಿಷ್ಟ 2 ಸಂಖ್ಯೆಯ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದನ್ನು ಹಾಗೂ ಬಹುಮಹಡಿ ಕಟ್ಟಡಕ್ಕೆ ಎಂ.ಟೆಕ್ ಪಾಸಾದ ಸ್ಟ್ರಕ್ಚರಲ್ ಎಂಜಿನಿಯರ್‌ನಿಂದ ಹಾಗೂ ದೃಢತೆಯ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.
225 ಚ.ಮೀ ಗಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ತೆ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಯಾವ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಕಟ್ಟಡದ ಗಾತ್ರಕ್ಕೆ ಅನುಗುಣವಾಗಿ ಮಳೆನೀರು ಸಂಗ್ರಹ ಸಾಮರ್ಥ್ಯ ಎಷ್ಟಿರಬೇಕು ಎಂಬುದನ್ನು ಗೊತ್ತುಪಡಿಸಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಕೇಂದ್ರ ಸರ್ಕಾರ ಪರಿಸರ ಮತ್ತು ಅರಣ್ಯ ಸಚಿವಾಲಯಗಳಿಂದ ನೀಡಲಾಗುವ ನಿರಾಕ್ಷೇಪಣಾ ಪತ್ರಗಳಲ್ಲಿ ಹಸಿರು ಕಟ್ಟಡ (ಗ್ರೀನ್ ಬಿಲ್ಡಿಂಗ್) ನಿರ್ಮಿಸುವ ಸಂಬಂಧ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ವಿವರಿಸಲಾಗಿದೆ. ಈ ಕಟ್ಟಡಗಳು ಶೇ 25ರಿಂದ ಶೇ 30ರಷ್ಟು ಇಂಧನ ಉಳಿತಾಯಕ್ಕೆ ಕ್ರಮವಹಿಸಬೇಕಿದೆ.
ಅಗ್ನಿಶಾಮಕ ಇಲಾಖೆಯ ಮಾರ್ಗಸೂಚಿಯನ್ವಯ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ವಿವರಿಸಲಾಗಿದೆ. ಬಹುಮಹಡಿ ಕಟ್ಟಡಗಳಲ್ಲಿ ಎಷ್ಟು ಲಿಫ್ಟ್ ಗಳಿರಬೇಕು. ಮೆಟ್ಟಿಲುಗಳ ಸಂರಚನೆ ಹೇಗಿರಬೇಕು, ತುರ್ತು ನಿರ್ಗಮನ ದ್ವಾರಗಳು, ಹೊರಗಿನಿಂದ ಮೆಟ್ಟಿಲು ಸೌಕರ್ಯ, ಅಗ್ನಿ ಮುನ್ಸೂಚನೆ ವ್ಯವಸ್ಥೆ, ಸ್ವಯಂಚಾಲಿತವಾಗಿ ನೀರು ಚುಮುಕಿಸುವ ಸಂಬಂಧ ಸ್ಪಷ್ಟ ವಿವರಣೆ ನೀಡಲಾಗಿದೆ.
ಪಾಲಿಕೆ ವ್ಯಾಪ್ತಿಯ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಗುರುತಿಸುವಿಕೆ ಹಾಗೂ ಇದರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಾರಂಪರಿಕ ಸಮಿತಿಯನ್ನು ರಚಿಸುವ ಪ್ರಸ್ತಾಪವೂ ಕರಡಿನಲ್ಲಿದೆ.
‘ನಗರದ ಬೆಳವಣಿಗೆಗೆ ಉಪವಿಧಿ ಪೂರಕ’
ಬೈಲಾ ರೂಪಿಸುವ ಪ್ರಕ್ರಿಯೆ ಶುರುವಾಗಿ 15 ವರ್ಷಗಳಾಗಿವೆ. ಈಗ ಪಾಲಿಕೆ ಸಭೆಯಲ್ಲಿ ಅದರ ಕರಡು ಅನುಮೋದನೆಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಒಳ್ಳೆಯ ಬೆಳವಣಿಗೆ. ಪ್ರತಿ ಐದರಿಂದ 10 ವರ್ಷಗಳ ಅವಧಿಯಲ್ಲಿ ನಗರದ ಬೆಳವಣಿಗೆಯ ವೈಖರಿ ಬದಲಾಗುತ್ತದೆ. ಈಗಿನ ಬೆಳವಣಿಗೆ ಹೇಗೆ ಆಗುತ್ತಿದೆ ಎಂಬುದನ್ನು ನೋಡಿಕೊಂಡು ನಗರದ ಭವಿಷ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಆಗಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಪಾಲಿಕೆ ಕಟ್ಟಡ ಉಪವಿಧಿಯನ್ನು ರೂಪಿಸಿದೆ. ಉಪ ವಿಧಿ ನಗರದ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂಬ ವಿಶ್ವಾಸ ಇದೆ.–ವಿನೋದ್ ಪಿಂಟೊ ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ
‘ಮೇಲ್ವಿಚಾರಣೆಗೆ ಎಂಪ್ಯಾನೆಲ್‌ಡ್ ಎಂಜಿನಿಯರ್‌ಗಳು’
ಇದರಿಂದ ಅನೇಕ ಅನುಕೂಲಗಳಿವೆ. ಬೈಲಾದಲ್ಲಿ ಜನರಿಗೆ ಹಾಗೂ ಅಧಿಕಾರಿ ವರ್ಗಕ್ಕೆ ಸಹಕಾರಿ ಯಾಗುವ ಅನೇಕ ಅಂಶಗಳನ್ನು ಇದರಲ್ಲಿ ಸೇರ್ಪಡೆ ಮಾಡಲಾಗಿದೆ. ವೃತ್ತಿಪರ ಎಂಜಿನಿಯರ್‌ಗಳ ಪದವಿ ಮತ್ತು ಅನುಭವ ಆಧರಿಸಿ ಯಾರು ಯಾವ ಕೆಲಸ ನಿರ್ವಹಿಸಬಹುದು ಎಂದು ನಿಖರವಾಗಿ ವ್ಯಖ್ಯಾನಿಸಲಾಗಿದೆ. ಕಟ್ಟಡ ನಿರ್ಮಾಣ ಕಾನೂನು ಬದ್ಧವಾಗಿ ನಡೆಯುವುದಕ್ಕೆ ಸಂಬಂಧಿಸಿದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕೆ ಎಂಪ್ಯಾನೆಲ್ಡ್ ಎಂಜಿನಿಯರ್‌ಗಳನ್ನು ಗುರುತಿಸುವ ಪ್ರಸ್ತಾವ ಬೈಲಾದಲ್ಲಿದೆ. ಈ ಪ್ಯಾನೆಲ್‌ನಲ್ಲಿ ಇರುವ ಎಂಜಿನಿಯರ್‌ಗೆ ನಿರ್ದಿಷ್ಟ ಕಟ್ಟಡದ ನಿರ್ಮಾಣದ ಮೇಲೆ ನಿಗಾ ಇಡುವ ಹೊಣೆ ವಹಿಸಲಾಗುತ್ತದೆ.
ಆ ಎಂಜಿನಿಯರ್ ಕಟ್ಟಡ ನಿರ್ಮಾಣದ ಪ್ರತಿ ಹಂತದಲ್ಲೂ ಸ್ಥಳ ಪರಿಶೀಲನೆ ನಡೆಸಿ ಮಂಜೂರಾತಿ ಪಡೆದುಕೊಂಡ ರೀತಿಯಲ್ಲೆ ಕಟ್ಟಡ ನಿರ್ಮಾಣವಾಗುತ್ತಿದೆಯೇ ಸೆಟ್ ಬ್ಯಾಕ್ ಬಿಡಲಾಗಿದೆಯೇ ಎಂಬ ಬಗ್ಗೆ ಎಂಬ ಬಗ್ಗೆ ಪಾಲಿಕೆಗೆ ವರದಿ ನೀಡುತ್ತಾರೆ. ಇದು ಎಂಜಿನಿಯರ್‌ಗಳ ಉತ್ತರದಾಯಿತ್ವ ಹೆಚ್ಚಿಸಲಿದೆ. ಒಂದು ವೇಳೆ ಯಾವುದಾದರೂ ಎಂಜಿನಿಯರ್ ವರದಿ ಸುಳ್ಳು ನೀಡಿ ತನಿಖೆಯಲ್ಲಿ ಸಾಬೀತಾದರೆ ಆತ ನೋಂದಣಿಗೆ ಸಮಸ್ಯೆಯಾಗಲಿದೆ.
–ವಿಜಯ ವಿಷ್ಣು ಮಯ್ಯ, ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ‍್ಸ್ ರಾಷ್ಟ್ರೀಯ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ
‘ನಗರದ ಬೆಳವಣಿಗೆಗೆ ಶಿಸ್ತುಬದ್ಧ ಚೌಕಟ್ಟು’
‘ಪಾಲಿಕೆಯ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿ ಇರಲಿಲ್ಲ. ಕಟ್ಟಡ ಉಪವಿಧಿ ನಿರ್ಮಾಣ ಚಟುವಟಿಕೆಗೆ ಸಂಬಂಧಿಸಿದ ನಿಯಮಾವಳಿಯ ಚೌಕಟ್ಟು. ಅದನ್ನು ರೂಪಿಸಿ ಅದಕ್ಕೆ ಬದ್ಧವಾಗಿ ನಡೆದುಕೊಂಡು ಹೋದರೆ ನಗರದ ಬೆಳವಣಿಗೆಯೂ ವ್ಯವಸ್ಥಿತವಾಗಿ ಆಗಬಲ್ಲುದು. ಕಟ್ಟಡ ಉಪವಿಧಿ ರೂಪಿಸಬೇಕೆಂಬುದು ಎಷ್ಟೋ ವರ್ಷಗಳಿಂದ ಇರುವ ಬೇಡಿಕೆ. ಅದು ಕಾರ್ಯರೂಪಕ್ಕೆ ಬರಲು ಕಾಲ ಸನ್ನಿಹಿತವಾಗಿದೆ’ ಎಂದು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ತಿಳಿಸಿದರು.
’1976ರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಆಧಾರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಯ ಕರಡು ರೂಪಿಸಿದ್ದೇವೆ. ಕಾಯ್ದೆಯ ಅಂಶಗಳಿಗೆ ಧಕ್ಕೆ ಆಗದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ತಯಾರಿಸಿದ್ದೇವೆ. ಪಾಲಿಕೆಯ ಎಲ್ಲ 60 ಸದಸ್ಯರನ್ನು ವಿಶ್ವಾಸಕ್ಕೆ ಪಡೆದೇ ಉಪವಿಧಿಯ ನಿಯಮಗಳ ಕರಡನ್ನು ಅಂತಿಮಗೊಳಿಸಲಾಗಿದೆ. ನಿಯಮಾವಳಿಗಳ ಕ್ರೆಡೈ ಹಾಗೂ ಎಂಜಿನಿಯರ್‌ಗಳನ್ನು ಪ್ರತಿನಿಧಿಸುವ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದಿದ್ದೇವೆ. ಇದರಿಂದ ಜನಸಮಾನ್ಯರಿಗೆ ಅನುಕೂಲ ವಾಗುತ್ತೆ’ ಎಂದರು.
‘ಕಟ್ಟಡ ಉಪವಿಧಿಯ ಕರಡನ್ನು ಎರಡು ಸಲ ಸರ್ಕಾರಕ್ಕೆ ಕಳುಹಿಸಿದ್ದೇವೆ. ಮೊದಲು ಕಳುಹಿಸಿದ್ದ ಕರಡಿನ ಕೆಲವು ಅಂಶಗಳನ್ನು ಮರುಪರಿಶೀಲನೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿತ್ತು. ಆ ಅಂಶಗಳ ಬಗ್ಗೆ ಪಾಲಿಕೆಯ ಕೌನ್ಸಿ ಸಭೆಯಲ್ಲಿ ಚರ್ಚಿಸಿ ಅಂತಿಮ ಕರಡನ್ನು ಸರ್ಕಾರಕ್ಕೆ ಮತ್ತೆ ಕಳುಹಿಸಿದ್ದೇವೆ’ ಎಂದರು.
ಅಂಗವಿಕಲ ಸ್ನೇಹಿ ಸೌಕರ್ಯ– ಪ್ರತ್ಯೇಕ ಅಧ್ಯಾಯ
ಅಂಗವಿಕಲರಿಗೆ ಬೈಲಾದಲ್ಲಿ ಪ್ರತ್ಯೇಕ ಅಧ್ಯಾಯವನ್ನು ಕಟ್ಟಡ ಉಪವಿಧಿಗಳ ಕರಡಿನಲ್ಲಿ ಮೀಸಲಿಡಲಾಗಿದೆ. ಇದರಲ್ಲಿ ಎಲ್ಲಾ ಮಾದರಿಯ ಕಟ್ಟಡಗಳನ್ನು ಹೇಗೆ ಅಂಗವಿಕಲ ಸ್ನೇಹಿಯಾಗಿ ನಿರ್ಮಿಸ ಬೇಕು ರಾಷ್ಟ್ರೀಯ ಕಟಟಡ ಸಂಹಿತೆ (ಎನ್‌ಬಿಡಿ) ಪ್ರಕಾರ ಅವುಗಳಲ್ಲಿ ವಾಹನ ನಿಲುಗಡೆ ಶೌಚಾಲಯ ರ‍್ಯಾಂಪ್ ಸಂದೇಶ ಚಿಹ್ನೆಗಳನ್ನು ಅಳವಡಿಸಬೇಕು ಎಂಬುದನ್ನು ನಿರ್ದಿಷ್ಟಪಡಿಸಲಾಗಿದೆ.
ಅನುಮೋದಿತ ನಕ್ಷೆ ಉಲ್ಲಂಘನೆ– ವಿದ್ಯುತ್ ನೀರು ಯುಜಿಡಿಗೆ ಕತ್ತರಿ?
ಪಾಲಿಕೆಯಿಂದ ಪರವಾನಗಿ ಪಡೆಯದೇ ನಿರ್ಮಿಸುವ ಕಟ್ಟಡಗಳಿಗೆ ಹಾಗೂ ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀರಿನ ಹಾಗೂ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಸುಳ್ಳು ದಾಖಲೆ ತಪ್ಪು ಮಾಹಿತಿ ನೀಡಿ ಪಡೆಯಲಾದ ಪರವಾನಗಿಯನ್ನು ಹಿಂಪಡೆಯಲು ಕಟ್ಟಡ ಬೈಲಾದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.