ಇಡ್ಯಾ ಪಶ್ಚಿಮ ವಾರ್ಡ್‌ನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ಜಾಗ
ಮಂಗಳೂರು: ‘ಈಗ ಬೇಸಿಗೆಯಲ್ಲೇನೋ ಆರಾಮವಾಗಿ ನಡೆದಾಡಬಹುದು. ಮಳೆಗಾಲದಲ್ಲಿ ನೀವು ಇಲ್ಲಿಗೆ ಬಂದು ನೋಡಿ. ನಾವೀಗ ನಿಂತಿರುವ ಈ ಜಾಗದಲ್ಲೇ ಕೆಲವೊಮ್ಮೆ ಮೊಣಕಾಲು ವರೆಗೂ ನೀರು ನಿಂತಿರುತ್ತದೆ. ನೀರೆಂದರೆ ಬರೀ ನೀರಲ್ಲ. ಅದರಲ್ಲಿ ಊರಿನ ಕೊಳೆ, ಸಮುದ್ರದ ಉಪ್ಪಿನಂಶ ಎಲ್ಲವೂ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಾವು ಅನುಭವಿಸುತ್ತಿರುವ ಸಂಕಟವಿದು...’
‘ಇಲ್ಲಿಯ ರಾಜಕೀಯ ವಿಚಿತ್ರವಿದೆ. ಆದ್ದರಿಂದ ಹೆಸರು ಕೇಳಬೇಡಿ, ಅದನ್ನು ನಾನು ಹೇಳಲಾರೆ..’ ಎನ್ನುತ್ತಲೇ ಒಂದೆರಡು ಅಡ್ಡರಸ್ತೆಗಳಲ್ಲಿ ಸುತ್ತಾಡಿಸಿ ಸಮಸ್ಯೆಗಳನ್ನು ವಿವರಿಸಿದ ಯುವಕ ಇಡ್ಯಾ ಪಶ್ಚಿಮ ವಾರ್ಡ್‌ನಲ್ಲಿ ಪಟ್ಟಭದ್ರರ ವಿರುದ್ಧ ಗುಟ್ಟಾಗಿ ಹೋರಾಡುತ್ತಿರುವುದಾಗಿಯೂ ಹೇಳಿದ.
ಸುರತ್ಕಲ್, ಹೊಸಬೆಟ್ಟು, ಕುಳಾಯಿ ಭಾಗದಲ್ಲಿ ಸಮುದ್ರದ ಕಡೆಗೆ ಚಾಚಿಕೊಂಡಿರುವ ಸಣ್ಣ ವಾರ್ಡ್ ಇಡ್ಯಾ ಪಶ್ಚಿಮ. ಅನತಿ ದೂರದಲ್ಲಿ ಸಮುದ್ರ, ಮತ್ತೊಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ. ಇವೆರಡರ ನಡುವೆ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುತ್ತಿರುವ ಈ ವಾರ್ಡ್‌ನಲ್ಲಿ ಅತಿಯಾದ ಅಭಿವೃದ್ಧಿಯೇ ತೊಂದರೆಯಾಗಿದೆ ಎಂಬುದು ಹಲವರ ಅಭಿಪ್ರಾಯ.
ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಎಂಬುದು ಇಡ್ಯಾ ಪಶ್ಚಿಮದ ನಿವಾಸಿಗಳ ಪ್ರಮುಖ ಸಮಸ್ಯೆ. ಮನೆ ಚರಂಡಿ, ಕಾಲುವೆಗಳ ಸಮೀಪದಲ್ಲಿ ಮನೆಗಳನ್ನು ನಿರ್ಮಿಸಿಕೊಂಡವರು ನೀರು ಹರಿದು ಹೋಗುವ ಮೂಲಗಳಿಗೇ ಅಡ್ಡಿಮಾಡಿದ್ದಾರೆ. ಈಚೆಗೆ ಮನೆ, ಅಪಾರ್ಟ್‌ಮೆಂಟ್, ಲೇಔಟ್‌ಗಳನ್ನು ನಿರ್ಮಿಸುತ್ತಿರುವವರು ಯಾವ ನಿಬಂಧನೆಗಳನ್ನು ಕೂಡ ಪಾಲಿಸುತ್ತಿಲ್ಲ, ನೀರು ಹರಿದು ಹೋಗಲು ದಾರಿ ಬಿಡುವುದಿಲ್ಲ ಎಂಬ ಆರೋಪ ವಾರ್ಡ್‌ನ ಬಹುತೇಕ ಕಡೆಗಳಲ್ಲಿ ಕೇಳಿಬರುತ್ತಿದೆ.
ನಾರಾಯಣಗುರು ಮಂದಿರದ ಆಸುಪಾಸಿನಲ್ಲಿ ತುಂಬಾ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಆದರೆ ಇಲ್ಲೆಲ್ಲೂ ಚರಂಡಿಗಳೇ ಇಲ್ಲ. ಮಂದಿರದ ಹಿಂಭಾಗದ ಮನೆಯೊಂದ ಆವರಣ ಗೋಡೆ ಕುಸಿದು ಚರಂಡಿಗೆ ಬಿದ್ದಿದೆ. ಅದನ್ನು ಸರಿಪಡಿಸಲು ಮನೆ ಮಾಲೀಕರು ಮುಂದಾಗುತ್ತಿಲ್ಲ. ಹೀಗಾಗಿ ಅಲ್ಲಿ ಕಟ್ಟಿನಿಲ್ಲುವ ನೀರು ಕೆಲವು ಮನೆಗಳ ಸುತ್ತ ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ.
‘ಬಿದ್ದ ಗೋಡೆಯನ್ನು ಸರಿಪಡಿಸಿ ನೀರು ಹರಿಯಲು ವ್ಯವಸ್ಥೆ ಮಾಡುವಂತೆ ಅನೇಕ ಬಾರಿ ಕೋರಿದ್ದೇವೆ. ಆದರೆ ಮನೆಮಾಲೀಕ ಅದಕ್ಕೆ ಕಿವಿಗೊಡಲಿಲ್ಲ. ಲೇಔಟ್‌ಗಳನ್ನು ನಿರ್ಮಿಸುವವರು ಕೂಡ ಹಾಗೆಯೇ ಮಾಡುತ್ತಾರೆ. ಇದಕ್ಕೆ ಮಹಾನಗರ ಪಾಲಿಕೆಯವರು ತಡೆಹಾಕಬೇಕು’ ಎಂದು ‘ಹೋರಾಟಗಾರ’ ಯುವಕ ಹೇಳಿದ.
‘ಕೆಲವು ಮನೆಗಳು ಮಳೆಗಾಲದಲ್ಲಿ ಅಕ್ಷರಶಃ ಮುಳುಗಡೆ ಆಗುತ್ತವೆ. ನಾರಾಯಣ ಗುರು ಮಂದಿರಕ್ಕೆ ಹೋಗುವ ದಾರಿಯಲ್ಲಿರುವ ಬನದ ಎರಡು ಬದಿಗಳಲ್ಲಿ ಮನೆಗಳು ಇವೆ. ಈ ಭಾಗಕ್ಕೆ ಹರಿದು ಬರುವ ನೀರನ್ನು ತಡೆಯಲು ಆಗುವುದೇ ಇಲ್ಲ. ಆದ್ದರಿಂದ ಮಳೆಗಾಲದಲ್ಲಿ ಆ ಮನೆಗಳು ದ್ವೀಪದಲ್ಲಿ ಇದ್ದಂತಾಗುತ್ತವೆ’ ಎನ್ನುತ್ತಾರೆ ಮನೋಹರ ವಿ.ಜಿ.
ರಸ್ತೆಗಳು ಇವೆ. ಆದರೆ ಮಳೆಗಾಲದಲ್ಲಿ ತುಂಬ ಹಾನಿಯಾಗುವುದರಿಂದ ಶಾಶ್ವತ ಪರಿಹಾರ ಕಾಣಬೇಕು.
ಮನೆಗಳ ಸುತ್ತ ಕಸ ಕಡ್ಡಿ ತುಂಬಿ ಸಮಸ್ಯೆ ಆಗುತ್ತಿದೆ. ಅದನ್ನು ತೆಗೆದು ಸ್ವಚ್ಛ ಮಾಡಬೇಕು
ಕಟ್ಟಡಗಳನ್ನು ನಿರ್ಮಿಸುವವರು ನೀರು ಹರಿದುಹೋಗಲು ವ್ಯವಸ್ಥೆ ಮಾಡಬೇಕೆಂದು ನಿರ್ಬಂಧ ಹಾಕಬೇಕು.
ಅಭಿವೃದ್ಧಿ ಕಾಮಗಾರಿಗಳು ತುಂಬಾ ಆಗಿವೆ. ಆದರೆ ಕೊನೆಕೊನೆಯಲ್ಲಿ ಫಂಡ್ ಬಾರದೇ ಸಮಸ್ಯೆ ಆಯಿತು. ಹೀಗಾಗಿ ಸ್ವಲ್ಪ ಕೆಲಸ ಬಾಕಿ ಇದೆ.ನಯನಾ ಕೋಟ್ಯಾನ್, ನಿಕಟಪೂರ್ವ ಪಾಲಿಕೆ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.