ADVERTISEMENT

ದ್ವಿತೀಯ ಪಿಯುಸಿ ಪರೀಕ್ಷೆ: ಕೇರಳದ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 11:32 IST
Last Updated 22 ಮಾರ್ಚ್ 2020, 11:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಜಿಲ್ಲೆಯಲ್ಲಿ ಇದೇ 23ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷ್‌ ಭಾಷಾ ಪರೀಕ್ಷೆಗೆ ಹಾಜರಾಗುವ ಕೇರಳದ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷೆಯ ಕರ್ತವ್ಯ ನಿರ್ವಹಿಸುವ ಉಪನ್ಯಾಸಕರು, ನಿಯೋಜಿತ ಸಿಬ್ಬಂದಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅಗತ್ಯ ಸಲಕರಣೆ, ಪ್ರವೇಶ ಪತ್ರದೊಂದಿಗೆ ಸೂಚಿಸಿದ ಸ್ಥಳದಲ್ಲಿ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಹಾಜರಾಗಬೇಕು. ಉಪನ್ಯಾಸಕರು ಮತ್ತು ನಿಯೋಜಿತ ಸಿಬ್ಬಂದಿ ಕೂಡ ನಿಗದಿತ ಸಮಯಕ್ಕೆ ಹಾಜರಾಗಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಕೇರಳದ ವಿದ್ಯಾರ್ಥಿಗಳಿರುವ ಕಾಲೇಜಿನ ಪ್ರಾಂಶುಪಾಲರು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ, ವಿದ್ಯಾರ್ಥಿಗಳನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಿಗೆ ತಲುಪುವಂತೆ ಮತ್ತು ಪರೀಕ್ಷೆ ಮುಗಿದ ಬಳಿಕ ನಿರ್ದಿಷ್ಟ ಬಸ್‌ನಲ್ಲಿ ಅವರನ್ನು ಸ್ವಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು.

ಗಡಿಭಾಗದಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಸಹಕರಿಸಬೇಕು. ಅದಕ್ಕಾಗಿ 23 ರಂದು ಬೆಳಿಗ್ಗೆ 7 ರಿಂದ 8 ಗಂಟೆಯೊಳಗೆ ಕಡ್ಡಾಯವಾಗಿ ನಿರ್ದಿಷ್ಟ ಸ್ಥಳದಲ್ಲಿರಬೇಕು. ಯಾವುದೇ ವಿದ್ಯಾರ್ಥಿಗಳ ಪಾಲಕರು, ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಸ್ವಂತ ವಾಹನದಲ್ಲಿ ತಲುಪಿಸುವಂತಿಲ್ಲ ಹಾಗೂ ವಾಪಸ್ ಕರೆದುಕೊಂಡು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.

ADVERTISEMENT

ಮಂಗಳೂರು ಗಡಿಭಾಗದ ತಲಪಾಡಿ ಟೋಲ್‌ಗೇಟ್‌ನಿಂದ 15 ಬಸ್‌ಗಳು ಸೇರಿದಂತೆ 22 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.