
ಕ್ಯಾಂಪ್ಕೊ
ಮಂಗಳೂರು: ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ)ದ ಆಡಳಿತ ಮಂಡಳಿಯ ಚುನಾವಣೆ ನ.23ರಂದು ನಡೆಯಲಿದೆ. ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ ಆರು ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿದ್ದಾರೆ.
ಕರ್ನಾಟಕ ಮತ್ತು ಕೇರಳದ ಅಡಿಕೆ ಮತ್ತು ಕೊಕ್ಕೊ ಬೆಳೆಗಾರರ ಸಂಘಟನೆಯಾಗಿರುವ ಕ್ಯಾಂಪ್ಕೊಗೆ 15 ವರ್ಷಗಳ ನಂತರ ಮತ್ತೆ ಚುನಾವಣೆ ನಡೆಯುತ್ತಿದೆ. 2010ರಲ್ಲಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಂತರದ ಎರಡು ಅವಧಿಗೆ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು.
ಪ್ರಸ್ತುತ ಕೇರಳದ ಎಲ್ಲ ಒಂಬತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಕೇರಳದಿಂದ ಸಹಕಾರ ಭಾರತಿ ಬೆಂಬಲಿತ ಪದ್ಮರಾಜ ಪಟ್ಟಾಜೆ, ವೆಂಕಟರಮಣ ಭಟ್, ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ, ಸೌಮ್ಯ ಪ್ರಕಾಶ್, ರಾಧಾಕೃಷ್ಣ, ವಿವೇಕಾನಂದ ಗೌಡ, ಗಣೇಶ್ ಕುಮಾರ್, ಸದಾನಂದ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಒಟ್ಟು 10 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಮಾಲಿನಿ ಪ್ರಸಾದ್, ಗಣೇಶ್, ರಾಘವೇಂದ್ರ ಎಚ್.ಎಂ, ಉತ್ತರ ಕನ್ನಡದ ವಿಶ್ವನಾಥ ಹೆಗಡೆ ಅವಿರೋಧವಾಗಿ ಆಯ್ಕೆಯಾದವರು.
ಇನ್ನುಳಿದ ಆರು ಸ್ಥಾನಗಳಿಗೆ ದಯಾನಂದ ಹೆಗ್ಡೆ, ಮಹೇಶ್ ಚೌಟ, ಮುರಳೀಕೃಷ್ಣ ಕೆ.ಎನ್, ಪುರುಷೋತ್ತಮ್ ಭಟ್, ಸತೀಶ್ಚಂದ್ರ ಎಸ್.ಆರ್, ತೀರ್ಥರಾಮ ಎ.ವಿ, ಎಂ.ಜಿ. ಸತ್ಯನಾರಾಯಣ, ರಾಮ್ ಪ್ರತೀಕ್ ಕಣದಲ್ಲಿದ್ದಾರೆ.
ಎಂ.ಜಿ. ಸತ್ಯನಾರಾಯಣ ಮತ್ತು ರಾಮ್ ಪ್ರತೀಕ್ ಭಾರತೀಯ ಕಿಸಾನ್ ಸಂಘಕ್ಕೆ ಸೇರಿದವರಾದರೆ, ಆರು ಮಂದಿ ಸಹಕಾರ ಭಾರತಿ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಇವೆರಡೂ ಸಂಘಟನೆಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಗಳಾಗಿವೆ. ಇವೆರಡು ಸಂಘಟನೆಗಳ ಸದಸ್ಯರ ನಡುವೆಯೇ ಪೈಪೋಟಿ ಏರ್ಪಟ್ಟಿದೆ ಎಂದು ಕ್ಯಾಂಪ್ಕೊ ಸದಸ್ಯರೊಬ್ಬರು ತಿಳಿಸಿದರು.
ಎಂ.ಜಿ. ಸತ್ಯನಾರಾಯಣ, ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದು, ಅವರು ಬಂಡಾಯವಾಗಿ ಸ್ಪರ್ಧಿಸಿರುವ ಕಾರಣ ಅಧ್ಯಕ್ಷ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಐದು ವರ್ಷಗಳ ಅವಧಿಯ ನಿರ್ದೇಶಕ ಸ್ಥಾನಕ್ಕೆ ಒಟ್ಟು 30 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ನವೆಂಬರ್ 18ರಂದು 9 ಮಂದಿ ನಾಮಪತ್ರ ಹಿಂಪಡೆದರು.
ಒಟ್ಟು 5,576 ಸದಸ್ಯ ಮತದಾರರು ಇದ್ದು, ನ.23ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.