ಮಂಗಳೂರು: ಅಡಿಕೆಯಲ್ಲಿ ಹಾನಿಕಾರಕ ಅಂಶಗಳಿವೆ ಎಂಬ ಆರೋಪ ಆಗಾಗ ಕೇಳಿಬರುತ್ತಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ನೇತೃತ್ವದಲ್ಲಿ ಅಧ್ಯಯನ ಪ್ರಾರಂಭವಾಗಿದೆ ಎಂದು ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಕೆ. ಬಾಲಚಂದ್ರ ಹೆಬ್ಬಾರ್ ಹೇಳಿದರು.
ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸ್ಥಾಪಕರ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಡಿಕೆ ಆರೋಗ್ಯ ಹಾನಿಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯನ್ನು ಪರಿಶೀಲಿಸಿದಾಗ, ಅಡಿಕೆ ಜೊತೆ ಇತರ ಪದಾರ್ಥಗಳನ್ನು ಸೇರಿಸಿ ಸೇವಿಸಿದವರನ್ನು ಆಧರಿಸಿ ಸಿದ್ಧಪಡಿಸಿ ವರದಿ ಅದು ಎಂದು ತಿಳಿದಿದೆ. ಈ ಕಾರಣಕ್ಕೆ ಅಡಿಕೆ ಮತ್ತು ಆರೋಗ್ಯ ಬಗ್ಗೆ ಅಧ್ಯಯನ ನಡೆಸಲು ಯೋಚಿಸಲಾಗಿದೆ. ಕರಾವಳಿಯ ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆದು, ಅಡಿಕೆಯನ್ನು ಮಾತ್ರ ಸೇವಿಸುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗುವುದು. ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.
ಹವಾಮಾನ ಬದಲಾವಣೆಯು ಅಡಿಕೆಯ ಇಳುವರಿ ಮೇಲೆ ಪರಿಣಾಮ ಬೀರಿದೆ. ಅಡಿಕೆಗೆ ಬಾಧಿಸಿರುವ ಹಳದಿ ರೋಗ, ಎಲೆಚುಕ್ಕಿ ರೋಗಗಳ ಬಗ್ಗೆಯೂ ಸಮಗ್ರ ಅಧ್ಯಯನ ನಡೆಸಬೇಕಾಗಿದೆ ಎಂದು ಹೇಳಿದರು.
ಕ್ಯಾಂಪ್ಕೊ ಸಂಸ್ಥೆಯ ಹೊಸ ಚಾಕೊಲೇಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ‘ಉತ್ಪಾದನಾ ರಂಗದಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು ನೀಡಬೇಕಾಗಿದೆ. ಯುವಜನರು ನಿರೀಕ್ಷಿಸುವ 3.0 ಮಾದರಿಯ ಯೋಜನೆ ಅಳವಡಿಸಿಕೊಳ್ಳಬೇಕು. ತಾಂತ್ರಿಕ ಸಂಸ್ಥೆ ರಚಿಸುವ ಮೂಲಕ ಸಂಶೋಧನೆಗೆ ಆದ್ಯತೆ ನೀಡಬೇಕು’ ಎಂದರು.
ಕೃಷಿ ವಿಜ್ಞಾನಿ ಅಮೃತಾ ಕೃಷ್ಣಮೂರ್ತಿ ಮಾತನಾಡಿ, ಕೃಷಿಯಲ್ಲಿ ಕ್ರಿಮಿನಾಶಕದ ಬದಲಾಗಿ ಸುಸ್ಥಿರ ಕೃಷಿಗೆ ಒತ್ತು ನೀಡಿ, ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು ಎಂದರು.
ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಇದ್ದರು.
ಡಾರ್ಕ್ ಅಲೈಟ್’ ಮಾರುಕಟ್ಟೆಗೆ
ಕ್ಯಾಂಪ್ಕೊದ ಹೊಸ ಉತ್ಪನ್ನ ಡಾರ್ಕ್ ಅಲೈಟ್ ಆರೇಂಜ್ ಎಕ್ಲೇರ್ಸ್ ಕ್ಯಾಂಪ್ಕೊ ಟ್ರಫ್ಲೆಸ್ ಹಾಗೂ ಕ್ಯಾಂಪ್ಕೊ ಡೊಲೊಮೈಟ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ವಾರಣಾಸಿ ಆರ್ಗಾನಿಕ್ ಫಾರ್ಮ್‌ನ ಕೃಷ್ಣಮೂರ್ತಿ ಮತ್ತು ಅಶ್ವಿನಿ ಕೃಷ್ಣಮೂರ್ತಿ ಹೊರತಂದ ಕೊಕ್ಕೊ ಮೌಲ್ಯವರ್ಧಿತ ಉತ್ಪನ್ನದ ಬಗ್ಗೆ ತಿಳಿಸಲಾಯಿತು. ಕ್ಯಾಂಪ್ಕೊ ಶಾಖೆಗಳಲ್ಲಿ ಉತ್ತಮ ಸಾಧನೆ ಮಾಡಿದ ಸಿಬ್ಬಂದಿಯನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.