ಪುತ್ತೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾಂಪ್ಕೊ ಸಂಸ್ಥೆಯವರು ₹ 40 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕ ಸ್ಥಾಪನೆ ಮಾಡಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ನಗರದ ಹಳೆಯ ಗಿರಿಜಾ ಕ್ಲಿನಿಕ್ ಆವರಣ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ ಕೋವಿಡ್ ಸ್ಥಿತಿಗತಿ ಮತ್ತು ಮುಂಜಾಗ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಬಳಿಕ ಅವರು, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಈಗಾಗಲೇ ಗೇಲ್ ಕಂಪನಿಯವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದರು. ಆದರೆ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಪ್ರಸ್ತುತ ಕ್ಯಾಂಪ್ಕೊ ಅಧ್ಯಕ್ಷರು ಸಂಸ್ಥೆಯ ವತಿಯಿಂದ ಆಮ್ಲಜನಕ ಘಟಕ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಈ ಕೆಲಸ ಆರಂಭವಾಗುವ ಸಾಧ್ಯತೆ ಇದೆ ಎಂದರು.
ಆಸ್ಪತ್ರೆಯ ಆವರಣದಲ್ಲೇ ಘಟಕ ನಿರ್ಮಾಣಗೊಂಡು, ಆಸ್ಪತ್ರೆಯ ಎಲ್ಲ ಹಾಸಿಗೆಗಳಿಗೆ ಪೈಪ್‌ಲೈನ್ ಕಲ್ಪಿಸಲಾಗುವುದು. ಅಗತ್ಯವಿರುವ ಯಾವ ರೋಗಿಗಳು ಆಮ್ಲಜನಕ ಕೊರತೆ ಉಂಟಾಗದ ಸ್ಥಿತಿ ನಿರ್ಮಿಸುವುದು ಉದ್ದೇಶ. ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಳು ದಿನದ 24 ಗಂಟೆ ಬಳಕೆಯಾದರೆ ದಿನ
ವೊಂದಕ್ಕೆ 170 ಸಿಲಿಂಡರ್‌ಗಳು ಬೇಕಾಗಬಹುದು ಎಂದು ಅವರು ತಿಳಿಸಿದರು.
ನಗರಸಭೆಯ ಅಧ್ಯಕ್ಷ ಜೀವಂಧರ ಜೈನ್, ಪೌರಾಯುಕ್ತೆ ರೂಪಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಶಾಸಕರ ವಾರ್ ರೂಮ್ ಸದಸ್ಯರು ಇದ್ದರು.
ಪುತ್ತೂರಿನ ಗೌರಿ ಪೈ ಮುನ್ನಡೆಸುತ್ತಿದ್ದ ಗಿರಿಜಾ ಕ್ಲಿನಿಕ್ ಆರು ವರ್ಷಗಳಿಂದ ಮುಚ್ಚಿದೆ. ಈ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಶಾಸಕ ಸಂಜೀವ ಮಠಂದೂರು ಇಲ್ಲಿ ಭೇಟಿ ನೀಡಿ ಪರಿಶೀಲಿಸಿದರು.
ಗಿರಿಜಾ ಕ್ಲಿನಿಕ್ ಕಟ್ಟಡ ಸುಸಜ್ಜಿತವಾಗಿದೆ. ಇದರಲ್ಲಿ ವಾರ್ಡ್, ಹಾಸಿಗೆಗಳು ಇವೆ. ನೀರು, ವಿದ್ಯುತ್ ವ್ಯವಸ್ಥೆ ಸುವ್ಯವಸ್ಥಿತಗೊಳಿಸಿ, ಸಂಪೂರ್ಣ ಕಟ್ಟಡವನ್ನು ನಗರಸಭೆ ವತಿಯಿಂದ ಶುಚಿಗೊಳಿಸಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು. ತುರ್ತು
ಸಂದರ್ಭದಲ್ಲಿ ಇದನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
‘ಉಪ್ಪಿನಂಗಡಿಯಲ್ಲಿ 30 ಬೆಡ್’
ಅಗತ್ಯ ಬಂದರೆ ಉಪ್ಪಿನಂಗಡಿಯ ಹೊಸ ಸಮುದಾಯ ಆಸ್ಪತ್ರೆ ಕಟ್ಟಡದಲ್ಲಿ 30 ಹಾಸಿಗೆ ಸಿದ್ಧವಿದೆ. ಇದಲ್ಲದೆ ಪುತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜುಗೊಳಿಸಿದ್ದು, 70 ಹಾಸಿಗೆಗಳು ಇವೆ. ಅಗತ್ಯ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.