ಪುತ್ತೂರು (ದಕ್ಷಿಣ ಕನ್ನಡ): ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನವೊಂದು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಸಂಶೋಧಿಸಿರುವ, ರುಚಿಕರವಾಗಿರುವ ಉತ್ಪನ್ನ ಈ ಜೋನಿ (ಲಿಕ್ಷಿಡ್) ಬೆಲ್ಲ. ಗೇರುಹಣ್ಣಿನ ರಸದಿಂದಲೇ ಈ ಬೆಲ್ಲ ತಯಾರಿಸಲಾಗಿದೆ.
ಸಾಮಾನ್ಯವಾಗಿ ಗೇರು ಬೆಳೆಗಾರರು ಗೇರು ಹಣ್ಣನ್ನು ಉಪಯೋಗಿಸುವುದೇ ಇಲ್ಲ. ಹಿಂದೆ ಜಾನುವಾರುಗಳಿಗೆ ತಿನ್ನಲು ಕೊಡುತ್ತಿದ್ದರು. ಕೆಲವರು ಇದನ್ನು ವೈನ್, ಸಾರಾಯಿ ತಯಾರಿಸಲು ಬಳಸುತ್ತಿದ್ದರು. ಆದರೆ, ಸಾರಾಯಿ ತಯಾರಿಕೆ ಅಕ್ರಮವಾಗಿರುವುದರಿಂದ ಗೇರು ಹಣ್ಣುಗಳು ಮರದ ಬುಡದಲ್ಲೇ ಕೊಳೆತುಹೋಗುತ್ತಿವೆ.
ಕಬ್ಬಿನಿಂದ ತಯಾರಿಸುವ ಬೆಲ್ಲಕ್ಕೆ ಹೋಲಿಸಿದರೆ ಗೇರುಹಣ್ಣಿನ ಬೆಲ್ಲದಲ್ಲಿ ‘ಗ್ಲೆಸೆಮಿಕ್’ ಅಂಶ ಅತಿ ಕಡಿಮೆ ಇದೆ. ಮಧುಮೇಹಿಗಳೂ ಸೇವಿಸಲು ಯೋಗ್ಯವಾದ ಜೋನಿ ಬೆಲ್ಲಕ್ಕೆ ಸಂಶೋಧನಾ ನಿರ್ದೇಶನಾಲಯ ‘ಪೇಟೆಂಟ್’ ಪಡೆದುಕೊಂಡಿದೆ.
ಗೇರಿನ ರಸ ಬಳಸಿ ಅದರಲ್ಲಿನ ಅಂಶವನ್ನು ಸಾಂದ್ರೀಕರಿಸಿ ಬೆಲ್ಲ ಸಿದ್ಧಪಡಿಸಲಾಗಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಈ ಬೆಲ್ಲದಲ್ಲಿ ಹೆಚ್ಚಿನ ಪ್ರೊಟೀನ್, ನಾರಿನ ಅಂಶಗಳಿವೆ ಎಂದು ನಿರ್ದೇಶನಾಲಯ ಹೇಳಿದೆ.
ಪೇಟೆಂಟ್ ಅನ್ನು ಸ್ವಸಹಾಯ ಗುಂಪುಗಳಿಗೆ ಅಥವಾ ಆಸಕ್ತ ಸ್ವ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಈ ಬೆಲ್ಲವನ್ನು ಸಿದ್ಧಪಡಿಸಲು ಬೇಕಾದ ಎಲ್ಲ ತಂತ್ರಜ್ಞಾನ ನೀಡಿ ಬೆಲ್ಲದ ಉತ್ಪಾದನೆಗೆ ಅವಕಾಶವನ್ನು ಕಲ್ಪಿಸಿಕೊಡಲು ನಿರ್ದೇಶನಾಲಯ ತೀರ್ಮಾನಿಸಿದೆ.
ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಲಾಯದ ವಿಜ್ಞಾನಿ ಜ್ಯೋತಿ ನಿಶಾದ್ ಅವರು ಈ ಜೋನಿ ಬೆಲ್ಲದ ಸಂಶೋಧಕಿ.
ಹಲವು ರೀತಿಯಲ್ಲಿ ಗೇರುಹಣ್ಣಿನ ಮೌಲ್ಯವರ್ಧನೆಯಾಗಿದ್ದು, ಇದೀಗ ಗೇರು ಸಂಶೋಧನಾ ನಿರ್ದೇಶನಾಲಯವು ಬೆಲ್ಲವನ್ನು ತಯಾರಿಸಲು ಮುಂದಾಗಿದೆ ಎಂದು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ದಿನಕರ ಅಡಿಗ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.