
ಗೇರು ಹಣ್ಣಿನ (ಗೋಡಂಬಿ) ತೋಟಗಾರಿಕೆ
ಮಂಗಳೂರು: ‘ಜಗತ್ತಿನ ಒಟ್ಟು ಗೋಡಂಬಿ ಬಳಕೆಯಲ್ಲಿ ಭಾರತದ ಪ್ರಮಾಣ ಮೂರನೇ ಒಂದರಷ್ಟಿದೆ. ದೇಶದ ಗೋಡಂಬಿ ಸಂಸ್ಕರಣೆಯಲ್ಲಿ ಕರ್ನಾಟಕದ ಪಾಲು ಶೇ 25ರಷ್ಟಿದೆ. ರಾಜ್ಯದ ಕಚ್ಚಾಗೇರು ಆಮದು ಪ್ರಮಾಣ 5 ಲಕ್ಷ ಟನ್‌ಗೆ ತಲುಪಿದೆ’ ಎಂದು ಕರ್ನಾಟಕ ಗೇರು ಉತ್ಪಾದಕರ ಸಂಘ ಹೇಳಿದೆ.
‘ಮಂಗಳೂರಿನ ಗೇರು ಸಂಸ್ಕರಣಾ ಉದ್ಯಮಕ್ಕೆ (1925ರಲ್ಲಿ ಆರಂಭ) ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ‘ಗೋಡಂಬಿ ಶತಮಾನೋತ್ಸವ ಶೃಂಗ’ವನ್ನು ಇದೇ 14ರಿಂದ 16ರವರೆಗೆ ಇಲ್ಲಿ ಆಯೋಜಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಸ್. ಅನಂತ ಕೃಷ್ಣ ರಾವ್ ಹಾಗೂ ಶೃಂಗದ ಸಂಚಾಲಕ ಕೆ. ಪ್ರಕಾಶ್ ಕಲ್ಬಾವಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಗೇರು ಸಂಸ್ಕರಣೆಯಲ್ಲಿ ಹೊಸ ಆವಿಷ್ಕಾರಗಳ ಪರಿಚಯ, ಸಮಸ್ಯೆಗಳ ಬಗ್ಗೆ ಚರ್ಚೆ ಇರಲಿದೆ. ದೇಶದಲ್ಲಿ ಗೋಡಂಬಿ ಸಂಸ್ಕರಣೆಯಲ್ಲಿ ತೊಡಗಿರುವ ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.
‘ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅದರಲ್ಲೂ ಮಂಗಳೂರು ಗೋಡಂಬಿಗೆ ಬೇಡಿಕೆ ಹೆಚ್ಚಿದೆ. ಆರಂಭದಲ್ಲಿ ವರ್ಷಕ್ಕೆ 50 ಸಾವಿರ ಟನ್ ಇದ್ದ ಕಚ್ಚಾ ಗೇರು ಬೀಜ ಸಂಸ್ಕರಣೆಯ ಪ್ರಮಾಣ ಈಗ ವರ್ಷಕ್ಕೆ 5 ಲಕ್ಷ ಟನ್‌ಗೆ ತಲುಪಿದೆ. ನವಮಂಗಳೂರು ಬಂದರಿಗೆ ಏಳು ತಿಂಗಳಲ್ಲಿ 3.45 ಲಕ್ಷ ಟನ್ ಕಚ್ಚಾಗೇರು ಆಮದಾಗಿದ್ದು, ಒಂದು ವರ್ಷದಲ್ಲಿ ಇದರ ಪ್ರಮಾಣ 5 ಲಕ್ಷ ಟನ್ ಆಗಲಿದೆ’ ಎಂದರು.
ಭಾರತದ ಸಂಸ್ಕರಣಾ ಉದ್ಯಮಕ್ಕೆ 20 ಲಕ್ಷ ಟನ್ ಕಚ್ಚಾ ಗೇರು ಬೀಜ ಬೇಕು. ಆದರೆ, ನಮ್ಮ ದೇಶದಲ್ಲಿ ಬೆಳೆಯುವುದು ಸರಾಸರಿ 5 ಲಕ್ಷ ಟನ್ ಮಾತ್ರ. ನಮಗೆ ಬೇಕಿರುವ ಕಚ್ಚಾ ಗೇರು ಬೀಜಗಳ ಪೈಕಿ ಶೇ 25ರಷ್ಟು ಮಾತ್ರ ದೇಶೀಯವಾಗಿ ಬೆಳೆಯಲಾಗುತ್ತಿದೆ. ಶೇ 75ರಷ್ಟು ಹೊರದೇಶಗಳನ್ನೇ ಅವಲಂಬಿಸಿದ್ದೇವೆ. ಕರ್ನಾಟಕದಲ್ಲಿ ಕಚ್ಚಾ ಗೇರು ಬೆಳೆಯುವ ಪ್ರಮಾಣ 50 ಸಾವಿರ ಟನ್‌ನಷ್ಟು ಮಾತ್ರ. ರಾಜ್ಯದ 26 ಜಿಲ್ಲೆಗಳಲ್ಲಿ ಗೇರು ಕೃಷಿ ಇದ್ದು, ಇದಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕು. ಗೇರು ಹಣ್ಣಿನಿಂದ ಕಚ್ಚಾ ಗೇರು ಬೀಜ ಹೊರ ತೆಗೆದ ನಂತರ, ಆ ಹಣ್ಣು (ಹಣ್ಣಿನ ಶೇ 80ರಷ್ಟು ಭಾಗ) ಈಗ ವ್ಯರ್ಥವಾಗುತ್ತಿದೆ. ಅದರಿಂದ ಉಪ ಉತ್ಪನ್ನ ತಯಾರಿಸಿ ಈ ಬೆಳೆಯನ್ನು ಲಾಭದಾಯಕವಾಗಿಸಬೇಕಿದೆ ಎಂದರು.
ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ದರ ಹೆಚ್ಚಾಗಿದೆ. ಹೀಗಾಗಿ ನಮ್ಮ ದೇಶದ ಗೋಡಂಬಿ ರಫ್ತು ಪ್ರಮಾಣ ಕೇವಲ 50 ಸಾವಿರ ಟನ್‌ನಷ್ಟು ಮಾತ್ರ ಇದೆ ಎಂದು ಹೇಳಿದರು.
ರಾಜ್ಯದ ಕರಾವಳಿಯಲ್ಲಿ ಅಂದಾಜು 400 ಗೋಡಂಬಿ ಸಂಸ್ಕರಣಾ ಘಟಕಗಳು ಇದ್ದವು. ಈಗ 250 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಯಾಂತ್ರೀಕರಣಕ್ಕೆ ಒಗ್ಗಿಕೊಳ್ಳದಿರುವುದು ಮತ್ತಿತರ ಕಾರಣ ಕೆಲ ಘಟಕಗಳು ಮುಚ್ಚಿವೆ. ಘಟಕಗಳು ಕಡಿಮೆಯಾದರೂ, ಗೋಡಂಬಿ ಸಂಸ್ಕರಣೆಯ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಅವರು ಹೇಳಿದರು.
ಸಂಘ ಉಪಾಧ್ಯಕ್ಷ ಎಂ. ತುಕಾರಾಮ ಪ್ರಭು, ಕೋಶಾಧಿಕಾರಿ ಗಣೇಶ ಕಾಮತ್, ಕಾರ್ಯದರ್ಶಿ ಅಮಿತ್ ಪೈ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.