ADVERTISEMENT

ಅಂಗವಿಕಲರಿಗೆ ಪೋಷಕತ್ವ ಪ್ರಮಾಣಪತ್ರ

ಸೇವಾಭಾರತಿ ನೋಡೆಲ್‌ ಏಜೆನ್ಸಿಯಾಗಿ ನೇಮಕ: ಸಿಂಧೂ ಬಿ.ರೂಪೇಶ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 13:50 IST
Last Updated 6 ಫೆಬ್ರುವರಿ 2020, 13:50 IST
ಮಂಗಳೂರಿನ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ವಯಸ್ಕ ಅಂಗವಿಕಲರಿಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಕಾನೂನುಬದ್ಧ ಪೋಷಕತ್ವ ಪ್ರಮಾಣಪತ್ರ ವಿತರಿಸಿದರು.
ಮಂಗಳೂರಿನ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ವಯಸ್ಕ ಅಂಗವಿಕಲರಿಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಕಾನೂನುಬದ್ಧ ಪೋಷಕತ್ವ ಪ್ರಮಾಣಪತ್ರ ವಿತರಿಸಿದರು.   

ಮಂಗಳೂರು: ಅಂಗವಿಕಲ ವಯಸ್ಕರ ಭದ್ರ ಭವಿಷ್ಯದ ದೃಷ್ಟಿಯಿಂದ ನ್ಯಾಷನಲ್ ಟ್ರಸ್ಟ್ ಕಾಯ್ದೆ ಅನ್ವಯ ಅಂಗವಿಕಲರ ಕಾನೂನುಬದ್ಧ ಪೋಷಕತ್ವ ಪ್ರಮಾಣಪತ್ರ ಪಡೆಯುವುದು ಅಗತ್ಯ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅಭಿಪ್ರಾಯಪಟ್ಟರು.

ನಗರದ ಸೇವಾಭಾರತಿ ವತಿಯಿಂದ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಗುರುವಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಂಟು ಮಂದಿಗೆ ಕಾನೂನುಬದ್ಧ ಪೋಷಕತ್ವ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಅಂಗವಿಕಲರ ಸೇವೆಯಲ್ಲಿ ಸೇವಾಭಾರತಿಯ ಸಾಧನೆಯನ್ನು ಗುರುತಿಸಿ, ಪೋಷಕತ್ವ ಪ್ರಮಾಣಪತ್ರ ನೀಡುವ ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಈಗ ಎಂಟು ಮಂದಿಗೆ ಪ್ರಮಾಣಪತ್ರ ವಿತರಿಸಲಾಗಿದ್ದು, ಹಂತಹಂತವಾಗಿ ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲ ಅಂಗವಿಕಲರಿಗೆ ಈ ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಹದಿನೆಂಟು ವರ್ಷ ಮೇಲ್ಪಟ್ಟ ಅಂಗವಿಕಲರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಗಿದೆ. ಜತೆಗೆ ಮುಖ್ಯವಾಹಿನಿಯಲ್ಲಿ ಅಂಗವಿಕಲರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಕೂಡಾ ಇದು ನೆರವಾಗಲಿದೆ ಎಂದು ವಿಶ್ಲೇಷಿಸಿದರು.

ಆಟಿಸಂ, ಸಿಲೆಬ್ರಲ್‌ಪ್ಲಾಸಿಯಂತಹ ನ್ಯೂನತೆಗಳಿಂದ ಪ್ರೌಢಾವಸ್ಥೆ ತಲುಪಿದ ಬಳಿಕವೂ ಸ್ವಂತ ನಿರ್ಧಾರ ಕೈಗೊಳ್ಳಲು ಅಸಮರ್ಥರಾದವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಳ್ಳಲಿದೆ ಎಂದು ವಿವರಿಸಿದರು.

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಯಮುನಾ ಡಿ., ಸೇವಾ ಭಾರತಿ ಅಧ್ಯಕ್ಷೆ ಸುಮತಿ ವಿ.ಶಣೈ, ಜಿಲ್ಲಾ ಅಂಗವಿಕಲರ ಸಮಿತಿ ಸದಸ್ಯ ಗುಣಪಾಲ, ಸೇವಾಭಾರತಿಯ ವಿನೋದ್ ಶೆಣೈ, ಪುಷ್ಪಲತಾ, ಡಾ.ಮುರಳೀಧರ ನಾಯಕ್, ಸೇವಾ ಭಾರತಿ ಕಾರ್ಯದರ್ಶಿ ನಾಗರಾಜ ಭಟ್, ವಿಶ್ವಸ್ಥ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನರಸಿಂಹರಾಜು ಅವರು ಸೇವಾ ಭಾರತಿ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.