ADVERTISEMENT

ಕೋಳಿ ತ್ಯಾಜ್ಯ: ಸಾರ್ವಜನಿಕರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 11:38 IST
Last Updated 10 ಜುಲೈ 2018, 11:38 IST
ವಿಟ್ಲ ಸಮೀಪದ ಬಿಲ್ಲಂಪದವು ಎಂಬಲ್ಲಿ  ಸಾರ್ವಜನಿಕ ಜಾಗದಲ್ಲಿ ಕೋಳಿ ತ್ಯಾಜ್ಯ ತುಂಬಿದ ಗೋಣಿಚೀಲಗಳನ್ನು ಎಸೆದಿರುವುದು. (ವಿಟ್ಲ ಚಿತ್ರ)
ವಿಟ್ಲ ಸಮೀಪದ ಬಿಲ್ಲಂಪದವು ಎಂಬಲ್ಲಿ  ಸಾರ್ವಜನಿಕ ಜಾಗದಲ್ಲಿ ಕೋಳಿ ತ್ಯಾಜ್ಯ ತುಂಬಿದ ಗೋಣಿಚೀಲಗಳನ್ನು ಎಸೆದಿರುವುದು. (ವಿಟ್ಲ ಚಿತ್ರ)   

ವಿಟ್ಲ: ಲಾರಿಗಳಲ್ಲಿ ಕೋಳಿ ಮಾಂಸ ತ್ಯಾಜ್ಯ ತುಂಬಿದ ಗೋಣಿ ಚೀಲಗಳನ್ನು ವಿಟ್ಲ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದು, ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆ ಸಾಧ್ಯತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಲ್ಲಂಪದವು ಗೇರು ನಿಗಮದ ಗುಡ್ಡದಲ್ಲಿ ನೆಗಳಗುಳಿ ಭಾಗಕ್ಕೆ ಹೋಗುವ ಕಚ್ಛಾ ರಸ್ತೆಯ ಬದಿಯಲ್ಲೇ ಮಂಗಳವಾರ ಸುರಿದಿದ್ದಾರೆ. ಕೇರಳಕ್ಕೆ ಕೋಳಿ ಹಾಗೂ ಅಕ್ರಮವಾಗಿ ಮಾಂಸವನ್ನು ಸಾಗಾಟ ಮಾಡುವ ಲಾರಿಗಳಲ್ಲಿ ತ್ಯಾಜ್ಯವನ್ನು ತುಂಬಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಎಸೆಯಲಾಗುತ್ತಿದೆ. ಕುದ್ದುಪದವು - ಪೆರುವಾಯಿ ರಸ್ತೆಯ ಬಿಲ್ಲಂಪ್ದವು ನಿರ್ಜನ ಪ್ರದೇಶದಲ್ಲಿ ರಾತ್ರಿ ಸಮಯ ತ್ಯಾಜ್ಯ ತುಂಬಿದ ಗೋಣಿ ಚೀಲವನ್ನು ಎಸೆದು ಹೋಗಲಾಗಿದೆ. ಎಸೆದ ತ್ಯಾಜ್ಯವನ್ನು ಎಸೆದವರ ಕೈಯಲ್ಲೇ ತೆಗೆಸುವ ಕಾರ್ಯ ಆಗಬೇಕು ಎಂದು ಅಳಿಕೆ ಗ್ರಾಮ ಪಂಚಾಯಿತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಜೂನ್‌ 24ರ ಆಸುಪಾಸಿನಲ್ಲಿ ಬೆರಿಪ್ಪದವು - ಬಾಳೆಕೋಡಿ - ಕನ್ಯಾನ ಒಳ ರಸ್ತೆಯ ಶಾಂತಿ ಮೂಲೆ ಎಂಬಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ತುಂಬಿದ ಗೋಣಿ ಚೀಲಗಳನ್ನು ಎಸೆದು ಹೋಗಿದ್ದರು. ಜುಲೈ 3ಕ್ಕೆ ತೋರಣಕಟ್ಟೆ - ಕುದ್ದುಪದವು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದು ಲೋಡಿನಷ್ಟು ಕೋಳಿ ತ್ಯಾಜ್ಯ ಕಾಹಲಾಗಿತ್ತು. ಈಗ ಮತ್ತೆ ಬಿಲ್ಲಂಪದವು ಪರಿಸರದಲ್ಲಿ ಗೋಣಿಯಲ್ಲಿ ತುಂಬಿದ ತ್ಯಾಜ್ಯ ಹಾಕಲಾಗಿದೆ.

ADVERTISEMENT

ತಿಂಗಳ ಅವಧಿಯಲ್ಲಿ 3 ಕಡೆಗಳಲ್ಲಿ ಈ ರೀತಿಯ ಪ್ರಕರಣ ನಡೆಯುತ್ತಿದ್ದು,ಆರೋಗ್ಯ ಅಧಿಕಾರಿಗಳು, ಪಂಚಾಯಿತಿ ಆಡಳಿತ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೇರಳಕ್ಕೆ ಹೋಗುವ ಅಕ್ರಮ ಕೋಳಿ ಲಾರಿಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟಿಸುವ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ. ಸ್ಥಳೀಯವಾಗಿರುವ ಮಾಂಸ ಅಂಗಡಿಗಳನ್ನೇ ಮುಚ್ಚಿಸುವ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಂಚಾಯಿತಿಯಿಂದ ದೂರು: ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಶಿಕ್ಷಿಸಬೇಕೆಂದು ಆಗ್ರಹಿಸಿ ಅಳಿಕೆ ಗ್ರಾಮ ಪಂಚಾಯಿತಿ ಆಡಳಿತ ವಿಟ್ಲ ಠಾಣೆಗೆ ದೂರು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.