ಜೋಡಿ ಕೊಲೆ ಆರೋಪಿ, ‘ದಂಡುಪಾಳ್ಯ ಗ್ಯಾಂಗ್’ ಸದಸ್ಯ ಬಂಧನ
ಮಂಗಳೂರು: ನಗರದ ಉರ್ವದಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ದಂಡು ಪಾಳ್ಯ ಗ್ಯಾಂಗ್ ಸದಸ್ಯನನ್ನು ನಗರದ ಉರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
‘ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಂಡುಪಾಳ್ಯ ಗ್ರಾಮದ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ಅಲಿಯಾಸ್ ಕೆ. ಕೃಷ್ಣಪ್ಪ ಅಲಿಯಾಸ್ ಕೃಷ್ಣ (55 ವರ್ಷ) ಬಂಧಿತ ಆರೋಪಿ. ಆತ ಹೆಸರು ಬದಲಿಸಿಕೊಂಡು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳಿಯ ಬಿ.ಕೆ ಪಳ್ಳಿಯಲ್ಲಿರುವ ವಿಜಯನಗರ ಕಾಲೋನಿಯಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿಂದ ಆತನನ್ನು ಬಂಧಿಸಿ ಕರೆತಂದು ಇಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
1997ರ ಅ.11ರಂದು ಮಧ್ಯ ರಾತ್ರಿ ನಗರದ ಉರ್ವ ಮಾರಿಗುಡಿ ಕ್ರಾಸ್ ಬಳಿಯ ‘ಅನ್ವರ್ ಮಹಲ್’ ಎಂಬ ಮನೆಗೆ ‘ದಂಡುಪಾಳ್ಯ ಗ್ಯಾಂಗ್’ ಎಂದೇ ಕುಖ್ಯಾತವಾಗಿದ್ದ ದರೋಡೆಕೋರರ ತಂಡವು ನುಗ್ಗಿತ್ತು. ಮನೆಯಲ್ಲಿದ್ದ ಲೂಯಿಸ್ ಡಿಮೆಲ್ಲೊ (80 ವರ್ಷ) ಹಾಗೂ ರಂಜಿತ್ ವೇಗಸ್ (19 ವರ್ಷ) ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳ್ನು ದೊಚಿಕೊಂಡು ಹೋಗಿತ್ತು. ದೊಡ್ಡ ಹನುಮ ಅಲಿಯಾಸ್ ಹನುಮ, ವೆಂಕಟೇಶ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲತಿಮ್ಮ ಅಲಿಯಾಸ್ ತಿಮ್ಮ, ಕೃಷ್ಣ ಅಲಿಯಾಸ್ ದಂಡುಪಾಳ್ಯ ಕೃಷ್ಣಅಲಿಯಾಸ್ ನಾಗರಾಜ, ಚಿಕ್ಕ ಹನುಮ, ಕೃಷ್ಣಾಡು ಅಲಿಯಾಸ್ ಕೃಷ್ಣ, ವೆಂಕಟೇಶ್ ಅಲಿಯಾಸ್ ರಮೇಶ್ ಆ ತಂಡದ ಸಹಚರರಾಗಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಎಂಟು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿಯ 34 ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯವು ದೊಡ್ಡ ಹನುಮ ಸೇರಿದಂತೆ ಐವರು ಈ ಪ್ರಕರಣದ ದೋಷಿಗಳು ಎಂದು ತೀರ್ಪು ನೀಡಿತ್ತು.
ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಚಿಕ್ಕ ಹನುಮ ತಲೆಮರೆಸಿಕೊಂಡಿದ್ದ. ಆತ ತನ್ನ ಹೆಸರನ್ನು ಚಿಕ್ಕ ಹನುಮಂತಪ್ಪ ಅಲಿಯಾಸ್ ಕೆ.ಕೃಷ್ಣಪ್ಪ ಅಲಿಯಾಸ್ ಕೃಷ್ಣ ಬದಲಾಯಿಸಿಕೊಂಡು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಈ ಪ್ರಕರಣವನ್ನು ನಗರದ ಜೆಎಂಎಫ್‌ಸಿ 2ನೇ ನ್ಯಾಯಾಲಯವು ದೀರ್ಘಾವಧಿಯಿಂದ ಬಾಕಿ ಉಳಿದ ಪ್ರಕರಣ ಎಂದು ಪರಿಗಣಿಸಿತ್ತು. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಆರೋಪಿ ಚಿಕ್ಕ ಹನುಮನ ವಿರುದ್ಧ 2010ರಲ್ಲಿ ಬಂಧನ ವಾರೆಂಟ್ ಹೊರಡಿಸಿತ್ತು.
‘ಆರೋಪಿ ಚಿಕ್ಕ ಹನುಮನ ವಿರುದ್ಧ ಕೊಲೆ ಮತ್ತು ದರೋಡೆಗೆ ಸಂಬಂಧಿಸಿ ರಾಜ್ಯದಲ್ಲಿ ಸುಮಾರು 13 ಪ್ರಕರಣಗಳು ದಾಖಲಾಗಿವೆ ಎಂದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ’ ಎಂದು ಕಮಿಷನರ್ ತಿಳಿಸಿದ್ದಾರೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಉರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ಎಚ್.ಎಂ, ಪಿಎಸ್ಐಗಳಾದ ಗುರಪ್ಪ ಕಾಂತಿ, ಎಲ್.ಮಂಜುಳಾ, ಎಎಸ್ಐ ವಿನಯ ಕುಮಾರ್ ಮತ್ತು ಸಿಬ್ಬಂದಿ ಲಲಿತಾಲಕ್ಷ್ಮಿ, ಅನಿಲ್, ಪ್ರಮೋದ್, ಆತ್ಮಾನಂದ ಹಾಗೂ ಹರೀಶ್ ಭಾಗವಹಿಸಿದ್ದಾರೆ. ಈ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಈ ತಂಡಕ್ಕೆ ಬಹುಮಾನಕ್ಕಾಗಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.