ADVERTISEMENT

ಮಂಗಳೂರು: ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಕ್ಕೆ ವಿರೋಧ

ಡಿವೈಎಫ್‌ಐ ನೇತೃತ್ವ ವಿವಿಧ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 13:26 IST
Last Updated 9 ಜೂನ್ 2022, 13:26 IST
ಮಂಗಳೂರಿನ ಹ್ಯಾಮಿಲ್ಟನ್‌ ವೃತ್ತದಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. –ಪ್ರಜಾವಾಣಿ ಚಿತ್ರ
ಮಂಗಳೂರಿನ ಹ್ಯಾಮಿಲ್ಟನ್‌ ವೃತ್ತದಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. –ಪ್ರಜಾವಾಣಿ ಚಿತ್ರ   

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ವೃತ್ತಗಳಲ್ಲಿ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಕ್ಕೆ ಕಲ್ಲುಗಳನ್ನು ಹಾಕಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಒಂದು ವಾರದೊಳಗೆ ಈ ಕಲ್ಲುಗಳನ್ನು ತೆರವುಗೊಳಿಸದಿದ್ದರೆ ಸಾರ್ವಜನಿಕರ ಜತೆಗೂಡಿ ಪ್ರತಿಭಟಿಸಲಾಗುವುದು ಎಂದು ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಸಿದರು.

ಡಿವೈಎಫ್‌ಐ ನೇತೃತ್ವದಲ್ಲಿ ನಗರದ ಹ್ಯಾಮಿಲ್ಟನ್ ವೃತ್ತದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಟ್ರಾಫಿಕ್ ಐಲ್ಯಾಂಡ್ ನಿರ್ಮಿಸಲು ನಗರದ ಹ್ಯಾಮಿಲ್ಟನ್, ಕ್ಲಾಕ್‌ಟವರ್ ಬಳಿ ಪ್ರಾಯೋಗಿಕವಾಗಿ ಕಲ್ಲನ್ನು ಜೋಡಿಸಿ, ವಿನ್ಯಾಸ ಮಾಡಲಾಗಿದೆ. ಇದರಿಂದ ಅನವಶ್ಯಕ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಂದ ಸಂಚಾರ ದಟ್ಟಣೆ ಆಗುತ್ತದೆ ಎಂದು ಆರೋಪಿಸುವವರಿಗೆ, ಈ ಸಮಸ್ಯೆ ಬಗ್ಗೆ ಅರಿವಿಲ್ಲವೇ’ ಎಂದು ಪ್ರಶ್ನಿಸಿದರು.

ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ಸ್ಮಾರ್ಟ್ ಸಿಟಿ ಯೋಜನೆಯಿಂದ ನಗರದಲ್ಲಿ ಅಭಿವೃದ್ಧಿ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಈಗಾಗಲೇ ಇದ್ದ ಕಾಂಕ್ರೀಟ್‌ ರಸ್ತೆಗಳನ್ನು ತೆರವುಗೊಳಿಸಿ, ಮತ್ತೆ ಹೊಸ ರಸ್ತೆ ನಿರ್ಮಿಸುವ ಮೂಲಕ ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ’ ಎಂದರು.

ADVERTISEMENT

ಮುಖಂಡರಾದ ದಯಾನಂದ ಶೆಟ್ಟಿ,ನವೀನ್ ಕೊಂಚಾಡಿ, ಭಾರತಿ ಬೋಳಾರ, ಮನೋಜ್ ವಾಮಂಜೂರು, ರಫೀಕ್ ಹರೇಕಳ, ಮಾಧುರಿ ಬೋಳಾರ, ಪ್ರಮೀಳಾ ದೇವಾಡಿಗ, ದಿನಕರ ಬಂಗೇರ, ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ಯೋಗೀಶ್ ಜಪ್ಪಿನಮೊಗರು, ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್‌ ಟವರ್ಸ್, ಹಮಾಲಿ ಕಾರ್ಮಿಕರ ಸಂಘಟನೆಯ ವಿಲ್ಲಿ ವಿಲ್ಸನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.